ದೆಹಲಿಯಲ್ಲಿ ‘ಆಪರೇಷನ್ ಕಮಲ’ ವಿಫಲವಾಗಿದೆ: ವಿಶ್ವಾಸ ನಿರ್ಣಯ ಮಂಡಿಸಿದ ಅರವಿಂದ್ ಕೇಜ್ರಿವಾಲ್
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ ವಿಶ್ವಾಸ ನಿರ್ಣಯವನ್ನ ಸದನದಲ್ಲಿ ಮಂಡಿಸುತ್ತಿದ್ದಂತೆ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನ ಸೋಮವಾರ ಆಡಳಿತಾರೂಢ ಎಎಪಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ವಾಗ್ವಾದ ಶುರುವಾಯಿತು.
“ಎಎಪಿ ಸರ್ಕಾರದ ಒಬ್ಬ ಶಾಸಕರೂ ಬಿಜೆಪಿಗೆ ಮಾರಾಟವಾಗಿಲ್ಲ ಎಂಬುದನ್ನು ಸಾಬೀತುಪಡಿಸುವುದು ಇಂದಿನ ವಿಶ್ವಾಸಮತವಾಗಿದೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಧಾನಸಭೆಯಲ್ಲಿ ಹೇಳಿದರು, ಬಿಜೆಪಿ ನಮ್ಮ ಶಾಸಕರಿಗೆ 20 ಕೋಟಿವರೆಗೆ ಆಫರ್ ಮಾಡಿದ್ದಾರೆ, ಆದರೆ ಅವರನ್ನ ಖರೀದಿಸಲು ಸಾಧ್ಯವಿಲ್ಲ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ವಿಶ್ವಾಸಮತ ಯಾಚನೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು, ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯನ್ನು ಕೇಳಿದ್ದು ಯಾರು ? ಯಾರೂ ಇಲ್ಲ. ಅಬಕಾರಿ ಮತ್ತು ಶಿಕ್ಷಣ ಇಲಾಖೆಗಳ ಹಗರಣಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಇದು ಕೇವಲ ಹತಾಶ ತಂತ್ರವಾಗಿದೆ ಎಂದು ಅಮಿತ್ ಮಾಳವಿಯ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ, 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯು ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ ನಡುವಿನ ಸ್ಪರ್ಧೆಯಾಗಿದೆ ಎಂದು ಎಎಪಿ ಹೇಳಿಕೊಂಡಿದೆ. ಎಎಪಿ ನಾಯಕನ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ “ಶ್ಲಾಘನೀಯ” ಕೆಲಸದಿಂದಾಗಿ ಅವರನ್ನ ತಡೆಯಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದ ಆಪ್ ಪಕ್ಷವು ಆರೋಪಿಸಿದೆ.








