ಬೀಜಿಂಗ್, ಜೂನ್ 4: ಜೂನ್ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಮಟ್ಟದ ಹೆಚ್ಚಳವಾಗಲಿದೆ ಎಂದು ಚೀನಾ ಭವಿಷ್ಯ ನುಡಿದಿದೆ. ಮುಂದಿನ ದಿನಗಳು ಭಾರತಕ್ಕೆ ಕಠಿಣವಾಗಿದ್ದು, ಜೂನ್ ತಿಂಗಳಲ್ಲಿ ಪ್ರತಿದಿನ ಸರಾಸರಿ ಸುಮಾರು 15000 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಲಿದೆ ಎಂದು ಚೀನಾದ ಅಧ್ಯಯನ ವರದಿ ತಿಳಿಸಿದೆ. ಕೊರೋನಾ ಸೋಂಕಿನ ಉಗಮ ಕೇಂದ್ರವೆಂದೇ ಕರೆಯಲಾಗುವ ಚೀನಾದ ವರದಿ ಎಂಬ ಕಾರಣಕ್ಕೆ ಈ ವಿಚಾರ ಮಹತ್ವ ಪಡೆದಿದೆ.
ಚೀನಾದ ಲ್ಯಾಂಜೋ ವಿಶ್ವವಿದ್ಯಾಲಯದ ಅಧ್ಯಯನ ತಂಡ ಜೂನ್ 15ರ ವೇಳೆಗೆ ಭಾರತದಲ್ಲಿ ಕೊರೊನಾ ಸೋಂಕು 15 ಸಾವಿರ ಮಂದಿಯಲ್ಲಿ ಪತ್ತೆಯಾಗಲಿದೆ ಎಂದು ತಿಳಿಸಿದ್ದು, ಪ್ರತಿದಿನ ಸೋಂಕಿನ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಏರಿಕೆ ಕಾಣಲಿದೆ ಎಂದು ಎಚ್ಚರಿಸಿದೆ. ಈ ಮೊದಲು ಜೂನ್ 2 ರಂದು ಭಾರತದಲ್ಲಿ 9,291 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಲಿದೆ ಎಂದು ಹೇಳಿತ್ತು. ಆದರೆ ಭಾರತದಲ್ಲಿ ಜೂನ್ 2 ರಂದು ಅಷ್ಟೊಂದು ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಾರದೆ ಇದ್ದರೂ ಆ ಸಂಖ್ಯೆಯ ಆಸುಪಾಸಿನಲ್ಲಿ ಅಂದರೆ 8909 ಪ್ರಕರಣಗಳು ದಾಖಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಜಗತ್ತಿನ 180ಕ್ಕೂ ಹೆಚ್ಚು ರಾಷ್ಟ್ರಗಳ ಕುರಿತು ಅಧ್ಯಯನ ಮಾಡಿರುವ ಚೀನಾದ ಲ್ಯಾಂಜೋ ವಿಶ್ವವಿದ್ಯಾಲಯದ ಅಧ್ಯಯನ ತಂಡ, ಪ್ರತಿದಿನ ಎಷ್ಟು ಹೊಸ ಕೊರೊನಾ ಪ್ರಕರಣಗಳು ವರದಿಯಾಗಲಿದೆ ಎಂದು ಮೊದಲೇ ಊಹಿಸಿದೆ.
ಚೀನಾ ಸಂಶೋಧನೆ ತಂಡ ನೀಡಿರುವ ಮುಂದಿನ ನಾಲ್ಕು ದಿನಗಳ ಕೊರೊನಾ ಪ್ರಕರಣಗಳ ಅಂಕಿ ಅಂಶ ಇಂತಿವೆ.
ಜೂನ್ 3 ರಂದು 9676 ,
ಜೂನ್ 4 ರಂದು 10,078
ಜೂನ್ 5 ರಂದು 10,498
ಜೂನ್ 6 ರಂದು 10,936 ಹೊಸ ಪ್ರಕರಣಗಳು ಪತ್ತೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ.
ಜೂನ್ 3 ರಂದು ಭಾರತದಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಸಂಖ್ಯೆ 9,524 ಆಗಿದ್ದು, ಚೀನಾ ಸಂಶೋಧನಾ ತಂಡ ಊಹಿಸಿದ ಸಂಖ್ಯೆಯ ಬಹಳ ಹತ್ತಿರವಿರುವುದು, ಚೀನಾ ಸಂಶೋಧನೆ ತಂಡದ ಭವಿಷ್ಯ ನಿಜವಾಗುವುದೇ ಎಂಬ ಆತಂಕ ಸೃಷ್ಟಿಸಿದೆ.
ಭಾರತದಲ್ಲಿ ಮೇ 28ಕ್ಕೆ 7,607 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಲಿದೆ ಎಂದು ನಾವು ಅಂದಾಜಿಸಿದ್ದೆವು. ಆ ದಿನ ಭಾರತದಲ್ಲಿ 7,467 ಪ್ರಕರಣಗಳು ದಾಖಲಾಗಿದೆ . ನಮ್ಮ ಊಹೆಯ ಬಹುತೇಕ ಹತ್ತಿರದಲ್ಲಿ ಪ್ರಕರಣಗಳು ದಾಖಲಾಗಿದ್ದು, ನಮ್ಮ ಭವಿಷ್ಯ ಆರಂಭಿಕ ಹಂತದಲ್ಲಿದೆ ಎಂದು ಲ್ಯಾಂಜೋ ವಿಶ್ವವಿದ್ಯಾಲಯದ ಇನ್ನೋವೇಶನ್ ಸೆಂಟರ್ ಆಫ್ ವೆಸ್ಟರ್ನ್ ಇಕಾಲಜಿಕಲ್ ಸೇಫ್ಟಿಯ ನಿರ್ದೇಶಕ ಹುವಾಂಗ್ ಜಿಯಾನ್‌ಪಿಂಗ್ ತಿಳಿಸಿದ್ದಾರೆ.








