ಬೆಂಗಳೂರು : ರಿಕ್ಷಾ, ಟ್ಯಾಕ್ಸಿ ಚಾಲಕರ ಪರಿಹಾರಧನ ವಿತರಣೆಯಲ್ಲಿ ವಿಳಂಬವಾಗಬಾರದು. ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ 5,000 ರೂ.ಗಳ ಪರಿಹಾರ ಧನ ಒದಗಿಸಲು ಅಗತ್ಯವಿರುವ ಎಲ್ಲ ಕ್ರಮ ವಹಿಸಬೇಕು ಹಾಗೂ ಪರಿಹಾರ ಧನ ವಿತರಣೆಯಲ್ಲಿ ಯಾವುದೇ ವಿಳಂಬವಾಗಬಾರದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಾರಿಗೆ ಸಂಸ್ಥೆ ಬಸ್ಸುಗಳನ್ನು ಬಳಸಲು ಹಿಂಜರಿಯುತ್ತಿದ್ದು, ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಸಾರಿಗೆ ಇಲಾಖೆಯ ವಾಹನಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸುವ ಕೆಲಸವೂ ಆಗಬೇಕು.
ಮಹಾರಾಷ್ಟ್ರ ಬಿಟ್ಟು ಅಂತರ ರಾಜ್ಯ ಸಾರಿಗೆ ಸೇವೆಯನ್ನು ಕಲ್ಪಿಸಲು ಇತರೆ ರಾಜ್ಯಗಳ ಸಾರಿಗೆ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಬಸ್ಸುಗಳ ಸಂಚಾರ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡುವ ನಿರ್ದೇಶನ ಇರುವುದರಿಂದ ಬಸ್ಸುಗಳಲ್ಲಿ ಕಡಿಮೆ ಜನರನ್ನು ಹತ್ತಿಸಿಕೊಳ್ಳುವ ಬಗ್ಗೆ ಪರಿಣಿತರೊಂದಿಗೆ ಚರ್ಚಿಸಿ ತೀರ್ಮಾನ ಮಾಡಿ ಎಂದು ಹೇಳಿದರು. ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಕೋವಿಡ್19 ನಿಂದಾಗಿ ರಾಜಸ್ವ ಸಂಗ್ರಹ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಉಂಟಾಗಿರುವ ನಷ್ಟವನ್ನು ಸರಿದೂಗಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು, ಕೋವಿಡ್ 19ರ ಹಿನ್ನೆಲೆಯಲ್ಲಿ ನಾಲ್ಕು ನಿಗಮಗಳಲ್ಲಿ ನಷ್ಟ ಉಂಟಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಓಡಾಟದಿಂದ ಪರಿಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆ ಇದೆ. ಬೆಂಗಳೂರು ನಗರ ಪ್ರದೇಶದಿಂದ ರೈಲ್ವೆ ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆಗೆ ಹಾಗೂ ವಿಮಾನ ನಿಲ್ದಾಣದಿಂದ ನಗರದ ವಿವಿಧ ಪ್ರದೇಶಗಳಿಗೆ ಕಳುಹಿಸಲು ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳಲಾಗಿದೆ. ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ಸಾರಿಗೆ ಬಸ್ಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಂದ ಪರಿಹಾರಧನಕ್ಕೆ ಈಗಾಗಲೇ ಒಟ್ಟು 198929 ಅರ್ಜಿಗಳು ಸ್ವೀಕೃತವಾಗಿವೆ. ಈಗಾಗಲೇ ವಾಹನ ಚಾಲಕರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮಾ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ ಎಸ್ ಪಾಟೀಲ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜುಂ ಪರ್ವೆಜ್, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೆಶಕಿ ಸಿ ಶಿಖಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಉಪಸ್ಥಿತರಿದ್ದರು








