ಸುಖೇಶ್ ಚಂದ್ರಶೇಖರ್ ವಂಚನೆ ಪ್ರಕರಣ – ವಿಚಾರಣೆಗೆ ಹಾಜರಾದ ಬಾಲಿವುಡ್ ನಟಿ ನೋರಾ ಫತೇಹಿ
ಸುಖೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿಮಣಿ ಜಾಕ್ವೆಲಿನ್ ಫರ್ನಾಂಡೀಸ್ ನಂತರ ನಟಿ ನೋರಾ ಫತೇಹಿ ಅವರನ್ನ ಆರ್ಥಿಕ ಅಪರಾಧಗಳ ವಿಭಾಗದ (EOW) ದೆಹಲಿ ಪೊಲೀಸರು ಶುಕ್ರವಾರ ಮೊದಲ ಭಾರಿಗೆ ವಿಚಾರಣೆ ನಡೆಸಿದ್ದಾರೆ.
ಸುಮಾರು 6 ಗಂಟೆಗಳ ಕಾಲ ನಟಿಗೆ 50 ಪ್ರಶ್ನೆಗಳನ್ನು ಕೇಳಲಾಗಿದೆ. ಇದರಲ್ಲಿ ಸುಕೇಶ್ ಅವರಿಂದ ಯಾವಾಗ ಗಿಫ್ಟ್ ತೆಗೆದುಕೊಂಡಿರಿ? ನೀವು ಅವನನ್ನು ಎಲ್ಲಿ ಭೇಟಿಯಾದಿರಿ? ಎಂಬ ಪ್ರಶ್ನೆಗಳಿದ್ದವು ಎನ್ನಲಾಗಿದೆ. ಮೂಲಗಳ ಪ್ರಕಾರ ನೋರಾ ಸಂಪೂರ್ಣ ವಿಚಾರಣೆಗೆ ಸಹಕರಿಸಿದ್ದಾರೆ.
ನೋರಾ ಫತೇಹಿ ಹೇಳಿರುವ ಪ್ರಕಾರ “ನಾನು ಸುಕೇಶ್ ಅವರ ಪತ್ನಿಯನ್ನು ನೇಲ್ ಆರ್ಟ್ ಫಂಕ್ಷನ್ ನಲ್ಲಿ ಭೇಟಿಯಾದೆ. ಇಲ್ಲಿಯೇ ಅವರು ನನಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಬ್ಬರ ಕ್ರಿಮಿನಲ್ ಇತಿಹಾಸದ ಬಗ್ಗೆ ನನಗೆ ತಿಳಿದಿರಲಿಲ್ಲ. ಇದರೊಂದಿಗೆ ಜಾಕ್ವೆಲಿನ್ ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ನೋರಾ ಹೇಳಿದ್ದಾರೆ. ಮತ್ತೊಂದೆಡೆ, ದೆಹಲಿ ಪೊಲೀಸರು ಸೆಪ್ಟೆಂಬರ್ 12 ರಂದು ಜಾಕ್ವೆಲಿನ್ನನ್ನು ವಿಚಾರಣೆಗೆ ಕರೆದಿದ್ದಾರೆ. ವಾಸ್ತವವಾಗಿ, ದೆಹಲಿ ಪೊಲೀಸರು ಮತ್ತು ಇಡಿ ಈ ವಿಷಯದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇಡಿ ವಿಚಾರಣೆ ವೇಳೆ ಆರೋಪಿ ಸುಖೇಶ್ ಚಂದ್ರಶೇಖರ್ ಅವರು ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಐಷಾರಾಮಿ ಕಾರುಗಳು ಸೇರಿದಂತೆ ಹಲವು ದುಬಾರಿ ಉಡುಗೊರೆಗಳನ್ನ ನೀಡಿದ್ದಾಗಿ ಒಪ್ಪಿಕೊಂಡಿದ್ದ 14 ಅಕ್ಟೋಬರ್ 2021 ರಂದು, ನೋರಾ ಮತ್ತು ಸುಕೇಶ್ ಅವರನ್ನು ಮುಖಾಮುಖಿಯಾಗಿ ಕುಳಿತು ವಿಚಾರಣೆ ಮಾಡಲಾಯಿತು. ಈ ವೇಳೆ ನೋರಾ ಅವರೇ 1 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದರು.
ಸುಕೇಶ್ ಅವರ ಪತ್ನಿ ಲೀನಾ ಪೌಲ್ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಕ್ಕಾಗಿ ನೋರಾ ಫತೇಹಿ ಅವರಿಗೆ ಬಿಎಂಡಬ್ಲ್ಯು ಕಾರು ಮತ್ತು ಐಫೋನ್ ಉಡುಗೊರೆಯಾಗಿ ನೀಡಲಾಯಿತು. ನೋರಾ ಹೇಳಿಕೆಯನ್ನ 2002ರ ಮನಿ ಲಾಂಡರಿಂಗ್ ಕಾಯ್ದೆಯ ಸೆಕ್ಷನ್ 50(2) ಮತ್ತು 50(3) ಅಡಿಯಲ್ಲಿ ದಾಖಲಿಸಲಾಗಿದೆ.







