ಹೊಸದಿಲ್ಲಿ, ಜೂನ್ 5 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲಾ ವಲಸೆ ಕಾರ್ಮಿಕರನ್ನು 15 ದಿನಗಳಲ್ಲಿ ಅವರವರ ರಾಜ್ಯಗಳಿಗೆ ಕಳುಹಿಸಿ ಕೊಡುವಂತೆ , ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ. ಲಾಕ್‌ಡೌನ್ ಬಳಿಕ ವಿವಿಧ ರಾಜ್ಯಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಕಾರ್ಮಿಕರನ್ನು ಕಳುಹಿಸಲು ಸಾಕಷ್ಟು ಸಮಯವಾಗಿದೆ ಎಂದು ನ್ಯಾಯಾಲಯ ಸೂಚಿಸಿದೆ. ಸುಪ್ರೀಂ ಕೋರ್ಟ್ ಈ ಕುರಿತು ತನ್ನ ಸಂಪೂರ್ಣ ಆದೇಶವನ್ನು ಮುಂದಿನ ಮಂಗಳವಾರ ಪ್ರಕಟಿಸಲಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ.ಕೌಲ್ ಮತ್ತು ಎಮ್.ಆರ್. ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ನಾವು ನಿಮಗೆ ಮತ್ತು ರಾಜ್ಯಗಳಿಗೆ ಎಲ್ಲಾ ವಲಸಿಗರನ್ನು ಅವರವರ ಊರಿಗೆ ಕಳುಹಿಸಲು 15 ದಿನಗಳ ಸಮಯವನ್ನು ನೀಡುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಷ್ಟೇ ಅಲ್ಲ ವಲಸಿಗರ ನೋಂದಣಿ ಇರಬೇಕು ಎಂದೂ ಹೇಳಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದೇ ಸಂದರ್ಭದಲ್ಲಿ ಇಲ್ಲಿಯವರೆಗೆ ಅಂದಾಜು 1 ಕೋಟಿ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ರಸ್ತೆ ಸಾರಿಗೆ ಮೂಲಕ 41 ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಿ ಕೊಡಲಾಗಿದ್ದು 57 ಲಕ್ಷ ಕಾರ್ಮಿಕರನ್ನು ರೈಲು ಮೂಲಕ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ದೆಹಲಿ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ವಿಚಾರಣೆಯ ವೇಳೆ ದೆಹಲಿಯಲ್ಲಿ ಸುಮಾರು 2 ಲಕ್ಷ ಕಾರ್ಮಿಕರು ಇನ್ನೂ ಇದ್ದು ಅವರು ಊರಿಗೆ ಹೋಗಲು ಬಯಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. 10,000 ಕ್ಕಿಂತ ಕಡಿಮೆ ಕಾರ್ಮಿಕರು ತಮ್ಮ ಊರುಗಳಿಗೆ ಹಿಂತಿರುಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.








