ಶಿವಮೊಗ್ಗ : ಪ್ರತಿಷ್ಠಿತ ಕಾರ್ಖಾನೆಗಳಲ್ಲೊಂದಾಗಿದ್ದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹಾಗಾಗಿ ಪುನಶ್ಚೇತನ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಅರಣ್ಯ ಮತ್ತು ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಸ್ಥಗಿತಗೊಂಡಿದ್ದ ಎಂ.ಪಿ.ಎಂ.ಕಾಗದ ಕಾರ್ಖಾನೆಯನ್ನು ಪುನರಾರಂಭಿಸಲು ರೂಪುರೇಷೆಗಳನ್ನು ಸಿದ್ಧಪಡಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಇರುವ ಅರಣ್ಯ ಸಂಪತ್ತನ್ನು ಬಳಸಿಕೊಂಡು ಕಾರ್ಖಾನೆಯನ್ನು ಸುಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಹತ್ವದ ಈ ನಿರ್ಣಯದಿಂದಾಗಿ ಜಿಲ್ಲೆಯ ಜನರಲ್ಲಿ ಹರ್ಷೋತ್ಸಾಹ ಮೂಡಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಹಲವು ಸಮಸ್ಯೆಗಳಿಂದ ರೋಗಗ್ರಸ್ಥವಾಗಿದ್ದ ಕಾರ್ಖಾನೆಯ ಸ್ಥಗಿತಗೊಂಡಿದ್ದರಿಂದ ಸಹಸ್ರಾರು ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಅಸಂಖ್ಯಾತ ನೌಕರರು ಕುಟುಂಬದ ನಿರ್ವಹಣೆಗಾಗಿ ಕೆಲಸವನ್ನರಸಿ ಊರು ತೊರೆದಿದ್ದರೆ ಮತ್ತೆ ಕೆಲವರು ಸರ್ಕಾರ ವಿವಿಧ ಇಲಾಖೆಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲ ಕಾರ್ಖಾನೆಯ ಯಂತ್ರಗಳು ತುಕ್ಕು ಹಿಡಿಯುವಂತಾಗಿತ್ತು.
ಈ ಕಾರ್ಖಾನೆಯನ್ನು ಪುನರಾರಂಭಿಸುವ ಸಂಬಂಧ ಸಾಂಸದ ಬಿ.ವೈ.ರಾಘವೇಂದ್ರ ಅವರು ಮುಖ್ಯಮಂತ್ರಿಗಳ ಗಮನಸೆಳೆದು ಒತ್ತಾಯಿಸಿದ್ದರು. ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ , ಅರಣ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಸಂದೀಪ್ ದವೆ, ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಪಿಸಿಸಿಎಫ್ ಸಂಜಯ್ ಮೋಹನ್, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಏಕರೂಪಕೌರ್ ಮುಂತಾದವರು ಉಪಸ್ಥಿತರಿದ್ದರು.








