ಬೆಂಗಳೂರು, ಜೂನ್ 8: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾರ ಸಾವಿನ ಸುದ್ದಿ ಕೇಳುತ್ತಲೇ ಚೆನ್ನೈ ನಿಂದ ಹೊರಟ ಅವರ ಸೋದರ ಮಾವ ಅರ್ಜುನ್ ಸರ್ಜಾ ಬೆಂಗಳೂರಿಗೆ , ನಿನ್ನೆ ರಾತ್ರಿ 11 ಗಂಟೆಗೆ ಆಗಮಿಸಿದರು. ತ್ಯಾಗರಾಜನಗರದ ಮನೆಯ ಬಳಿ ಅಂತಿಮ ದರ್ಶನಕ್ಕೆ ಚಿರುವಿನ ಪಾರ್ಥಿವ ಶರೀರವಿಟ್ಟಿದ್ದ ಜಾಗಕ್ಕೆ ನೇರವಾಗಿ ಧಾವಿಸಿ ಬಂದ ಅರ್ಜುನ್ ಸರ್ಜಾ ಚಿರು ಟಾಕ್ ಟು ಮಿ, ಚಿರು ನನ್ನ ಜೊತೆ ಮಾತಾಡು ಅಂತಾ ಕಣ್ಣೀರಿಟ್ಟರು.

ತನ್ನ ತಂಗಿಯ ಮಕ್ಕಳಾದ ಚಿರಂಜೀವಿ ಮತ್ತು ಧ್ರುವ ಇಬ್ಬರೂ ನನ್ನ ನೆಚ್ಚಿನ ಹುಡುಗರು ಎಂದು ಯಾವಾಗಲೂ ಅರ್ಜುನ್ ಸರ್ಜಾ ಹೇಳುತ್ತಿದ್ದರು. ಚಿರಂಜೀವಿ ಮತ್ತು ಧ್ರುವ ಇಬ್ಬರಿಗೂ ಅರ್ಜುನ್ ಸರ್ಜಾ ಗಾಡ್ ಫಾದರ್ ಆಗಿದ್ದರು. ಅರ್ಜುನ್ ಸರ್ಜಾ ಅವರು ತಮ್ಮ ಫೇಸ್ಬುಕ್ ನಲ್ಲಿ ಕಪ್ಪುಬಣ್ಣದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಕಂಬನಿ ಮಿಡಿದಿದ್ದಾರೆ.
ರಾತ್ರಿಯಿಡೀ ದುಃಖದಲ್ಲಿ ಅಳಿಯನ ಪಾರ್ಥಿವ ಶರೀರದ ಎದುರೇ ಅರ್ಜುನ್ ಸರ್ಜಾ ಕುಳಿತಿದ್ದರು. ನಟ ಸಾಧುಕೋಕಿಲ ಅರ್ಜುನ್ ಸರ್ಜಾ ಜೊತೆಗೆ ರಾತ್ರಿಯಿಡೀ ತ್ಯಾಗರಾಜನಗರದ ಮನೆಯ ಬಳಿ ಇದ್ದರು. ಇಂದು ಮಧ್ಯಾಹ್ನ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ಚಿರು ಅವರ ಅಂತ್ಯಕ್ರಿಯೆ ನಡೆಯಲಿದೆ.








