ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಚ್ಚರಿ ಮೂಡಿಸಿದೆ. ಈ ವಿಚಾರವಾಗಿ ಮಾತನಾಡಿದ ಸಿಎಂ ಯಡಿಯೂರಪ್ಪ, ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಸಿಗುವುದು ಎಂದು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯುಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೋರ್ ಕಮಿಟಿ ಸಭೆಯಲ್ಲಿ ಬೇರೆ ಹೆಸರುಗಳನ್ನು ಚರ್ಚೆ ಮಾಡಿದ್ದೇವು. ಚರ್ಚೆ ಮಾಡಿದ ಹೆಸರುಗಳನ್ನು ಪಕ್ಷದ ಕೇಂದ್ರ ಸಮಿತಿಗೆ ಕಳಿಸಲಾಗಿತ್ತು. ಸಾಮಾನ್ಯ ಕಾರ್ಯಕರ್ತರ ಹೆಸರು ಕೊಡಿ ಅಂತಾ ಪ್ರಧಾನಿ ನೇತೃತ್ವದ ಸಂಸದೀಯ ಸಭೆ ಸೂಚನೆ ನೀಡಿತ್ತು. ಹಾಗಾಗಿ ಅಶೋಕ್ ಗಸ್ತಿ, ಈರಣ್ಣ ಕಡಾಡಿ ಹೆಸರುಗಳನ್ನು ಕೊಟ್ಟಿದ್ದೇವು. ಆದರೆ ಅಂತಿಮ ಕ್ಷಣದಲ್ಲಿ ನನ್ನ ಜೊತೆಗೆ ರಾಷ್ಟ್ರೀಯ ಅಧ್ಯಕ್ಷರು ಚರ್ಚೆ ಮಾಡಿದರು. ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಲು ಕೇಂದ್ರ ಸಮಿತಿ ತೀರ್ಮಾನ ಮಾಡಿದೆ. ಬೇರೆ ರಾಜ್ಯಗಳಲ್ಲಿ ಇದೆ ರೀತಿಯ ತೀರ್ಮಾನ ಆಗಿದೆ.
ಆದ್ದರಿಂದ ರಾಜ್ಯಸಭೆ ಚುನಾವಣೆಯ ಟಿಕೆಟ್ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಗೆ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಅಲ್ಲದೆ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಸಿಗುವುದು ಬಿಜೆಪಿಯಲ್ಲಿ ಮಾತ್ರ. ಇದು ಕಾರ್ಯಕರ್ತರ ಜಯ. ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಿದಕ್ಕೆ. ಪ್ರಧಾನಿ ಮೋದಿ, ನಡ್ಡಾ, ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರು ರಾಜ್ಯಸಭೆಯಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು.








