karnataka cm – ರಾಜ್ಯದ 4 ಕಡೆ ವಿಶೇಷ ಹೂಡಿಕೆ ಪ್ರದೇಶ ಕರಡು ಸಿದ್ಧ
ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ 1ಸಾವಿರದ 200 ಕೋಟಿ ರೂಪಾಯಿ ಬಂಡವಾಳ ಹೂಡುವ ಮೂಲಕ ಲಕ್ಷಾಂತರ ಮಂದಿಗೆ ಉದ್ಯೋಗ ಒದಗಿಸಿ, ದಕ್ಷಿಣ ಭಾರತಕ್ಕೆ ಮಾದರಿಯಾಗಿ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾಡಳಿತ, FKCCI ಆಯೋಜಿಸಿದ್ದ FMCG ಕ್ಲಸ್ಟರ್ ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮಾಹಿತಿ ನೀಡಿದ್ದಾರೆ.
ಈ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ನಂತರ ಹುಬ್ಬಳ್ಳಿ-ಧಾರವಾಡ ಕೈಗಾರಿಕೆ ಬೆಳವಣಿಗೆಗೆ ಅತ್ಯುತ್ತಮ ಸೌಲಭ್ಯ ಹೊಂದಲಿದೆ.
ಧಾರವಾಡ ಸೇರಿದಂತೆ ರಾಜ್ಯದ ನಾಲ್ಕು ಕಡೆ ವಿಶೇಷ ಹೂಡಿಕೆ ಪ್ರದೇಶ ಕರಡು ಸಿದ್ಧಗೊಂಡಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಮಂಜೂರಾತಿ ನೀಡಲಾಗುವುದು. ದೇಶದ 500 ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿಗಳ ಪೈಕಿ 400 ಕರ್ನಾಟಕದಲ್ಲಿದ್ದು, ಇದಕ್ಕಾಗಿಯೇ ನೂತನ ನೀತಿ ಪರಿಷ್ಕರಣೆ ಹಂತದಲ್ಲಿದೆ ಎಂದು ತಿಳಿಸಿದರು.

ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ, ದೇಶ 3.2 ಟ್ರಿಲಿಯನ್ ಆರ್ಥಿಕತೆ ಹೊಂದಿದ್ದು, ಕರ್ನಾಟಕ 1 ಟ್ರಿಲಿಯನ್ ಆರ್ಥಿಕತೆ ಜೊತೆಗೆ ಭಾರತವು 2047ರಲ್ಲಿ 32 ಟ್ರಿಲಿಯನ್ ಆರ್ಥಿಕತೆ ಹೊಂದಲಿದೆ ಎಂದು ಹೇಳಿದರು.
ಕೇವಲ 400 ಸ್ಟಾರ್ಟ್ ಅಪ್ ಗಳಿದ್ದ ಭಾರತಕ್ಕೆ ಇದೀಗ 14 ಸಾವಿರ ಸ್ಟಾರ್ಟ್ ಅಪ್ ಗಳು ಬಂದಿವೆ.
3 ಮಿಲಿಯನ್ ನಿಂದ 60 ಮಿಲಿಯನ್ ಮೊಬೈಲ್ ಉತ್ಪಾದನೆ ಮೂಲಕ ಭಾರತ ಹೂಡಿಕೆಯೊಂದಿಗೆ ಉತ್ಪಾದನಾ ಕ್ಷೇತ್ರದಲ್ಲೂ ಗಣನೀಯ ಪ್ರಗತಿ ಸಾಧಿಸುತ್ತಿದೆ ಎಂದರು.








