Danushka Gunathilaka: ಅತ್ಯಾಚಾರದ ಆರೋಪ – ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಶ್ರೀಲಂಕಾ ಆಟಗಾರ ಅಮಾನತು…
ಅತ್ಯಾಚಾರದ ಆರೋಪ ಹೊತ್ತಿರುವ ಶ್ರಿಲಂಕಾ ಕ್ರಿಕೆಟ್ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಅಮಾನತುಗೊಳಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.
ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದನುಷ್ಕಾ ಗುಣತಿಲಕ ಬಂಧನಕ್ಕೊಳಗಾದ ನಂತರ ಅವರ ಹೆಸರನ್ನು ಯಾವುದೇ ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಯಾವುದೇ ಆಟಗಾರನ ಇಂಥಹ ನಡವಳಿಕೆ ವಿರುದ್ಧ’ಶೂನ್ಯ ಸಹಿಷ್ಣುತೆ’ ನೀತಿಯನ್ನು ಅಳವಡಿಸಿಕೊಳ್ಳುತ್ತದೆ ಎಂದು ಮಂಡಳಿ ಒತ್ತಿ ಹೇಳಿದೆ. ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಸಲು ಆಸ್ಟ್ರೇಲಿಯ ಕಾನೂನು ಅಧಿಕಾರಿಗಳಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತೇವೆ ಎಂದು ಶ್ರೀಲಂಕಾ ಹೇಳಿದೆ.
ಆಸ್ಟ್ರೇಲಿಯಾದ ಮಹಿಳೆಯೊಬ್ಬರ ಮೇಲೆ ದನುಷ್ಕಾ ಗುಣತಿಲ್ಕಾ ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ. ಶ್ರೀಲಂಕಾ ಕ್ರಿಕೆಟಿಗ ಮತ್ತು ಮಹಿಳೆ ಡೇಟಿಂಗ್ ಆಪ್ ಮೂಲಕ ಭೇಟಿಯಾಗಿದ್ದರು ಎನ್ನಲಾಗಿದೆ. ಭಾನುವಾರ ನಸುಕಿನ ಜಾವ 1 ಗಂಟೆಗೆ ಸಿಡ್ನಿಯ ಸಸೆಕ್ಸ್ ಸ್ಟ್ರೀಟ್ನಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಹೋಟೆಲ್ನಿಂದ ಪೊಲೀಸರು ದನುಷ್ಕಾ ಗುಣತಿಲಕ ಅವರನ್ನ ಬಂಧಿಸಿದ್ದರು.
Danushka Gunathilaka Suspended From All Forms Of Cricket Accused Of Sexually Assaulting Woman In Australia








