ನವದೆಹಲಿ : ಭಾರತದಲ್ಲಿ ಕೊರೊನಾಸುರನ ಆರ್ಭಟ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 9996 ಹೊಸ ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 2.75 ಲಕ್ಷಕ್ಕೆ ತಲುಪಿದೆ.
ಭಾರತದಲ್ಲಿ ಲಾಕ್ ಡೌನ್ ಸಡಿಲಿಕೆ ಆಗಿದ್ದು, ಕೊರೊನಾ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 9996 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಹಾರಾಷ್ಟ್ರದ್ದೇ ಸಿಂಹಪಾಲಾಗಿದೆ. ಬುಧವಾರ ಮಹಾರಾಷ್ಟ್ರದಲ್ಲೊಂದರಲ್ಲೇ ಸುಮಾರು 3,254 ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ತಮಿಳುನಾಡಿನಲ್ಲೂ ಕೊರೊನಾ ಸ್ಫೋಟಗೊಂಡಿದ್ದು, ಭಾರತದ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇ.45ರಷ್ಟು ಪ್ರಕರಣಗಳು ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ದಾಖಲಾಗಿವೆ.
ಇನ್ನು ನಿನ್ನೆ ಕೊರೊನಾ ವೈರಸ್ ಗೆ 274 ಮಂದಿ ಬಲಿಯಾಗಿದ್ದು, ಈವರೆಗೂ ಭಾರತದಲ್ಲಿ ಕೊರೊನಾ ಸೋಂಕಿತನಿಂದ ಸಾವನ್ನಪ್ಪಿದವರ ಸಂಖ್ಯೆ 7,745ಕ್ಕೆ ಏರಿಕೆಯಾಗಿದೆ. ಸಾವಿನ ಅಂಕಿಅಂಶದಲ್ಲೂ ಭಾರತದಲ್ಲಿ ಮಹಾರಾಷ್ಟ್ರವೇ ಮುಂದೆ ಇದ್ದು, ಸುಮಾರು 3,289 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಮಹಾರಾಷ್ಟ್ರದಲ್ಲಿ 94,041 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 44,517 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 46,074 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟಾರೆ ಭಾರತದಲ್ಲಿ 2.75 ಲಕ್ಷ ಜನ ಸೋಂಕಿತರ ಪೈಕಿ 1.35 ಲಕ್ಷ ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿನಿಂದ ಸುಮಾರು 7,745 ಜನರು ಸಾವನ್ನಪ್ಪಿದ್ದಾರೆ. 94,041 ಕೊರೊನಾ ಪ್ರಕರಣಗಳಿಂದ ಮಹಾರಾಷ್ಟ್ರ ಭಾರತದಲ್ಲಿ ಮೊದಲ ಸ್ಥಾನದಲ್ಲಿ ಇದ್ದರೆ, 35 ಸಾವಿರ ಕೊರೊನಾ ಸೋಂಕಿತರನ್ನು ಹೊಂದಿರುವ ತಮಿಳುನಾಡು ಎರಡನೇ ಸ್ಥಾನದಲ್ಲಿ ಇದೆ. ಇನ್ನೂ 31,309 ಸೋಂಕಿತರಿರುವ ನವದೆಹಲಿ ಮೂರನೇ ಸ್ಥಾನದಲ್ಲಿದೆ.








