ಬೆಂಗಳೂರು : ಹಾಲಿ ಸಚಿವರು ಮತ್ತು ಮಾಜಿ ಸಚಿವರ ಮಧ್ಯ ಟ್ವಿಟರ್ ವಾರ್ ನಡೆದಿದೆ. ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ, ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಾಜ್ಯ ಕರೆತರಲು ಬಳಸಬಹುದಾಗಿದ್ದ 9 .5 ಕೋಟಿಯಷ್ಟು ಹಣವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಅಲ್ಲದೆ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಸಂಬಳ ನೀಡಲು ಸಂಬಳವಿಲ್ಲ ಎಂದು ಲಕ್ಷ್ಮಣ ಸವದಿ ಹೇಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರನ್ನು ವ್ಯಂಗ್ಯ ಮಾಡಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ಪ್ರತಿಕ್ರಿಯೆ ನೀಡಿ ಮರು ಟ್ವೀಟ್ ಮಾಡಿರುವ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಶ್ರೀ ಪ್ರಿಯಾಂಕ್ ಖರ್ಗೆ ಅವರೇ ಸಿ.ಎಂ. ರಿಲೀಫ್ ಫಂಡ್‌ಗೆ 9.5 ಕೋಟಿ ರೂ. ಗಳನ್ನು ನಾನು ನೀಡಿದ್ದಾಗಿ ಅಪಸ್ವರವೆತ್ತಿ ತಾವು ಪ್ರತಿಕ್ರಿಯಿಸಿರುವುದು ನಿಜಕ್ಕೂ ವಿಷಾದನೀಯ. ಸಾರ್ವಜನಿಕರಿಗೆ ಇದರಿಂದ ತಪ್ಪು ಸಂದೇಶ ಹೋಗಬಾರದು ಎಂಬ ಹಿನ್ನೆಲೆಯಲ್ಲಿ ನಾನು ಸ್ಪಷ್ಟಪಡಿಸುವುದೇನೆಂದರೆ, ಈ 9.5 ಕೋಟಿ ರೂ. ಗಳನ್ನು ನನ್ನ ನಿರ್ಧಾರದಿಂದ ನೀಡಿಲ್ಲ, ಸಾರಿಗೆ ಸಂಸ್ಥೆಗಳ ನಮ್ಮೆಲ್ಲಾ ಸಿಬ್ಬಂದಿಗಳು / ಅಧಿಕಾರಿಗಳು ತಮ್ಮ ಒಂದು ದಿನದ ಸಂಬಳವನ್ನು ಸಿಎಂ.ಅಫ್ ಫಂಡ್‌ಗೆ ದೇಣಿಗೆಯಾಗಿ ನೀಡಿ ಲಾಕ್‌ಡೌನ್ ಸಂತ್ರಸ್ತರ ನೆರವಿಗೆ ಮುಂದಾಗಿದ್ದರು. ಆ ಚೆಕ್ಕನ್ನು ನಾವು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಿದ್ದೆವು, ಸಾರಿಗೆ ಸಿಬ್ಬಂದಿಗಳ ಈ ಉದಾತ್ತ ನಿರ್ಧಾರಕ್ಕೂ ತಪ್ಪು ವ್ಯಾಖ್ಯಾನ ನೀಡಿ “ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನಕ್ಕೆ” ತಾವು ಮುಂದಾಗಿದ್ದು ದುರ್ದೆವದ ಸಂಗತಿ.
ಇನ್ನು ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಸ್ಥೆಗಳ ಆದಾಯ ಸ್ಥಗಿತಗೊಂಡಿದ್ದರಿಂದ ಸಿಬ್ಬಂದಿಗಳಿಗೆ ಸಂಬಳ ನೀಡುವುದಕ್ಕೂ ಕಷ್ಟವಾಗಿದ್ದು ವಾಸ್ತವ. ಆದಾಗ್ಯೂ ನಮ್ಮ ಸರ್ಕಾರ ಈ ಸಂಬಳ ಬಿಡುಗಡೆ ಮಾಡಲು ಸೂಕ್ತ ಕ್ರಮ ಕೈಗೊಂಡಿದೆ ಎಂಬ ಮಾಹಿತಿಯ ಬಗ್ಗೆಯೂ ತಾವು “ಜಾಣ ಕಿವುಡುತನ” ಪ್ರದರ್ಶಿಸದೇ ಮುಕ್ತ ಮನಸ್ಸಿನಿಂದ ಗಮನಿಸಬೇಕಿತ್ತು, ಕರೋನಾ ಹಾವಳಿಯ ಈ ಸಂಕಷ್ಟ ದಿನಗಳಲ್ಲಿ ನಾವೆಲ್ಲಾ ರಾಜಕೀಯ, ಪಕ್ಷಬೇಧ ಮರೆತು ಒಂದಾಗಿ ಸಾರ್ವಜನಿಕರ ಹಿತರಕ್ಷಣೆಗೆ ಮುಂದಾಗೋಣ ಎಂಬ ಕಳಕಳಿಯೊಂದಿಗೆ ತಮಗೆ ಶುಭ ಹಾರೈಸುತ್ತೇನೆ ಎಂಬ ಪತ್ರವನ್ನು ಟ್ವೀಟರ್ ನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಕಿದ್ದಾರೆ.
ಲಕ್ಷ್ಮಣ ಸವದಿ ಅವರ ಸ್ಪಷ್ಟನೆಗೆ ಮರು ಟ್ವೀಟ್ ಮಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಕಳೆದ ತಿಂಗಳು ಶೇ.50ರಷ್ಟು ಮಾತ್ರ ವೇತನ ಪಾವತಿಸಲಾಗಿದೆ. ಹೊರಗುತ್ತಿಗೆ ನೌಕರರಿಗೆ ಕಳೆದೆರಡು ತಿಂಗಳಿಂದ ವೇತನವನ್ನೇ ನೀಡಿಲ್ಲ. ಹೊರ ರಾಜ್ಯದಲ್ಲಿನ ಕನ್ನಡಿಗರನ್ನು ಸಾರಿಗೆ ನಿಗಮದ ಬಸ್ ಗಳಲ್ಲಿ ಉಚಿತವಾಗಿ ಕರೆ ತರುವ ಬಗ್ಗೆ ನನ್ನ ಮನವಿಗೆ ಮೌನವೇ ಸರ್ಕಾರ ಉತ್ತರವಾಗಿದೆ. ಸಚಿವರು ನಿಗಮದ ಸಿಬ್ಬಂದಿಗಳ ಮತ್ತು ಪ್ರಯಾಣಿಕರ ಕಷ್ಟಗಳಿಗೆ ಜಾಣ ಕುರುಡತನವನ್ನು ಮೊದಲು ಬಿಡಲಿ ಎಂದು ಟಾಂಗ್ ಕೊಟ್ಟಿದ್ದಾರೆ








