ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ರಾಜ್ಯದಲ್ಲಿ ಬೇಗ ಗ್ರಾಮ ಪಂಚಾಯತಿ ಚುನಾವಣೆಗಳನ್ನು ನಡೆಸಲು ಕ್ಯಾಬಿನೆಟ್ ತೀರ್ಮಾನ ಮಾಡಿದೆ. ಅಲ್ಲದೆ ಚುನಾವಣೆ ಆಗುವವರೆಗೂ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ವಿಶೇಷ ಪ್ರಸಂಗದಲ್ಲಿ ಗ್ರಾಮಪಂಚಾಯತಿಗಳಿಗೆ ಆಡಳಿತಾಧಿಕಾರಿ ಅಥಾವ ಆಡಳಿತ ಸಮಿತಿ ನೇಮಕ ಮಾಡಲು ಸೆಕ್ಷನ್ 8 ರಲ್ಲಿ ಅವಕಾಶವಿದೆ. ಕಾನೂನಿನಲ್ಲಿ ಅವಕಾಶ ಇರುವ ಕಾರಣಕ್ಕೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ಆಡಳಿತಾಧಿಕಾರಿಗೆ 6 ತಿಂಗಳ ಮಾತ್ರ ಅಧಿಕಾರವಿರುತ್ತದೆ. ಆದ್ದರಿಂದ 6 ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಹಾಗಾಗಿ ಎರಡು ತಿಂಗಳಲ್ಲಿ ಚುನಾವಣೆ ನಡೆಸಲು ಚರ್ಚೆ ಮಾಡಲಾಗಿದೆ. ಅಲ್ಲದೆ ಗ್ರಾಮಪಂಚಾಯತಿಗಳಿಗೆ ಬಿಜೆಪಿ ಕಾರ್ಯಕರ್ತರನ್ನು ನೇಮಕ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯತಿಗೆ ನೇಮಕ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು.








