ಬೆಂಗಳೂರು: ರಾಜ್ಯದಲ್ಲಿ ಮಾಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಇಂದು 204 ಮಂದಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ. 204 ಸೋಂಕಿತರಲ್ಲಿ 157 ಮಂದಿ ಮಹಾರಾಷ್ಟ್ರ, ತಮಿಳುನಾಡಿನಿಂದ ಬಂದವರೇ ಆಗಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಹಾಗೂ ರಾಯಚೂರಿನಲ್ಲ 28 ವರ್ಷದ ಮಹಿಳೆಯನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.
ಜ್ವರ, ಉಸಿರಾಟದ ಸಮಸ್ಯೆ ಹಾಗೂ ಲಿವರ್ ಸಮಸ್ಯೆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರಿನ 35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಜೂನ್.7ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಜೂನ್.10ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅದೇ ರೀತಿ ಬೆಂಗಳೂರು ನಗರದ 60 ವರ್ಷದ ಮತ್ತೋರ್ವ ವೃದ್ಧರು ಜ್ವರ, ಶೀತ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜೂ.9ರಂದು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ರಾಯಚೂರಿನಿಂದ ಬೀದರ್‍ಗೆ ತೆರಳಿ ವಾಪಸ್ಸಾಗಿದ್ದ 38 ವರ್ಷದ ಮಹಿಳೆ, ಶೀತ, ಜ್ವರದಿಂದ ಬಳಲುತ್ತಿದ್ದರು. ಮೇ.30ರಿಂದಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಜೂ.8ರಂದೇ ಮೃತಪಟ್ಟಿದ್ದರು. ಮೃತರ ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ಕೊರೊನಾದಿಂದಲೇ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಯಾದಗಿರಿಗೆ 66, ಉಡುಪಿ 22
ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಯಾದಗಿರಿ ಇಂದೂ ಸಹ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಯಾದಗಿರಿಯಲ್ಲಿ ಇಂದು 66 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರೆ, 22 ಪ್ರಕರಣಗಳೊಂದಿಗೆ ಉಡುಪಿ 2ನೇ ಸ್ಥಾನದಲ್ಲಿದೆ. ಯಾದಗಿರಿ ಹಾಗೂ ಉಡುಪಿಗೆ ಮತ್ತದೇ ಮಹಾರಾಷ್ಟ್ರ ಕಂಟಕವಾಗಿ ಪರಿಣಮಿಸಿದೆ. ಯಾದಗಿರಿಯಲ್ಲಿ ಪತ್ತೆಯಾದ ಅಷ್ಟೂ 66 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಿಂದಲೇ ಬಂದಿದೆ. ಉಡುಪಿಗೂ ಮಹಾರಾಷ್ಟ್ರ ಹಾಗೂ ಕೆಲ ಸ್ಥಳೀಯ ಸೋಂಕಿತರೇ ಅಪಾಯ ತಂದಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 17 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದರೆ, ಮಲೆನಾಡು ಶಿವಮೊಗ್ಗದಲ್ಲಿ 10 ಪ್ರಕರಣಗಳು ಪಾಸಿಟಿವ್ ಬಂದಿವೆ. ಕಲಬುರಗಿ 16, ರಾಯಚೂರು 15, ಬೀದರ್ 14, ದಾವಣಗೆರೆ 9, ಕೋಲಾರ 6, ಮೈಸೂರು 5, ರಾಮನಗರ 5, ವಿಜಯಪುರದಲ್ಲಿ ತಲಾ ಪ್ರಕರಣಗಳು ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6245 ತಲುಪಿದೆ. ಇದರಲ್ಲಿ ಇಂದು 114 ಮಂದಿ ಡಿಶ್ಚಾರ್ಜ್ ಆಗಿದ್ದು, ಒಟ್ಟು 2976 ಮಂದಿ ಕೊರೊನಾದಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. 3195 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.








