ಮಂಗಳೂರು : ಕೊರೊನಾ ಲಾಕ್ ಡೌನ್ ಮಾರ್ಗಸೂಚಿಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ ಬೇಕಿದ್ದ ರಾಜಕೀಯ ನಾಯಕರೇ ಪದೇ ಪದೇ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಮೊನ್ನೆ ಚಿತ್ರದುರ್ಗದಲ್ಲಿ ಸಚಿವ ರಾಮುಲು ಅವರು ಮೆರವಣಿಗೆ ಮಾಡಿ ನಿಯಮ ಉಲ್ಲಂಘಿಸಿದ್ರೆ ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಇಂದು ಮಂಗಳೂರು ನಗರದ ವಾಮಂಜೂರು ಬಳಿ ಇರುವ ಗುರುಪುರ ಸೇತುವೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ, ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಲೋಕಾರ್ಪಣೆಗೊಳಿಸಿದರು. ಆದರೆ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮದಲ್ಲಿ 50ಕ್ಕಿಂತ ಅಧಿಕ ಮಂದಿ ಸೇರಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ಸರಕಾರದ ನಿಯಮವನ್ನೇ ಇಲ್ಲಿ ಗಾಳಿಗೆ ತೂರಲಾಗಿದ್ದು, 500ಕ್ಕಿಂತಲೂ ಅಧಿಕ ಮಂದಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಭಾಗವಹಿಸಿದ್ದರು. 
ನಿಯಮ ಕೇವಲ ಮೈಕ್ ಗೆ ಮಾತ್ರ ಸೀಮಿತ
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವುದು ಕೇವಲ ಮೈಕ್ ಗೆ ಮಾತ್ರ ಸೀಮಿತವಾಗಿತ್ತು. ಕಾರ್ಯಕ್ರಮದ ನಿರೂಪಕರು ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಕ್ಯಾರೇ ಎನ್ನದ ಜನರು ಉದ್ಘಾಟನೆ ವೇಳೆ ಮುಗಿಬಿದ್ದರು.
ಒಟ್ಟಾರೆ ಯಾವುದೇ ಕಾರ್ಯಕ್ರಮಗಳು ಕೇವಲ 50 ಜನರಿಗೆ ಸೀಮಿತವಾಗಬೇಕು ಎನ್ನುವ ನಿಯಮವನ್ನು ಬಿಜೆಪಿ ರಾಜ್ಯಾಧ್ಯಕ್ಷರ ಕಾರ್ಯಕ್ರಮದಲ್ಲಿಯೇ ಉಲ್ಲಂಘನೆ ಮಾಡಲಾಗಿರುವುದು ವಿಪರ್ಯಾಸವೇ ಸರಿ.








