ಮಂಗಳೂರು : ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಈ ವಿಚಾರದಲ್ಲಿ ಬೇಜವಾಬ್ದಾರಿ ತೋರುತ್ತಿದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೀಸ್ ಕಟ್ಟಬೇಡಿ ಅಂತ ಸರ್ಕಾರ ಹೇಳಿದೆ. ಹೀಗಾಗಿ ಫೀಸ್ ಕಟ್ಟಲು ಕೆಲವರು ತಯಾರಿದ್ದರೂ ಕಟ್ಟಲಿಲ್ಲ. ಹೀಗಾದ್ರೆ ಶಾಲೆಗಳು ಉಳಿಯೋದು ಹೇಗೆ . ಕೆಲ ಶಾಲಾ ಆಡಳಿತ ಮಂಡಳಿಗೆ ಕಟ್ಟಡದ ಬಾಡಿಗೆ ಕೊಡಲು ಸಾಧ್ಯವಿರುವುದಿಲ್ಲ. ಇದರಿಂದ ಶಾಲೆಗಳಲ್ಲಿ ಶಿಕ್ಷಕರು ಕೆಲಸ ಕಳೆದುಕೊಳ್ಳುತ್ತಾರೆ. ಆದ್ದರಿಂದ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿರಹಿತ ಸಾಲ ನೀಡಲಿ. ಹಾಗೆಯೇ ವಿದ್ಯಾರ್ಥಿಗಳ ಬಗ್ಗೆ ಹಾಗೂ ಮ್ಯಾನೆಟ್ ಮೆಂಟ್ ಬಗ್ಗೆ ಕೂಡ ಸರ್ಕಾರ ಗಮನಹರಿಸಲಿ ಎಂದು ಒತ್ತಾಯಿಸಿದರು.
ಇನ್ನು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ಸರ್ಕಾರ ಈ ವಿಚಾರದಲ್ಲಿ ಬೇಜವಬ್ದಾರಿ ತೋರುತ್ತಿದೆ. ಹೆತ್ತವರು ನೆಮ್ಮದಿಯಿಂದ ಇರುವಂತೆ ಮಾಡುವುದು ಶಿಕ್ಷಣ ಇಲಾಖೆ ಕರ್ತವ್ಯವಾಗಿದೆ. ಸರ್ಕಾರದ ಸಚಿವರು ಈ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದು ಗರಂ ಆದ ಖಾದರ್, ಲಾಜಿಕ್ ಇಲ್ಲದೆ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಪರೀಕ್ಷೆಯ ದಿನಾಂಕ ನಿಗದಿ ಮಾಡಲು ಗೊಂದಲ ಮಾಡಿದರು. ಪರೀಕ್ಷೆ ಮುಗಿದಿಲ್ಲ. ಆಗಲೇ ಆನ್ ಲೈನ್ ಶಿಕ್ಷಣ ಬೇಕಾ, ಬೇಡ್ವಾ ಅನ್ನೋ ಬಗ್ಗೆ ಮಾತನಾಡುತ್ತಿದ್ದೀರಿ. 5ನೇ ತರಗತಿವರೆಗೂ ಆನ್ ಲೈನ್ ಶಿಕ್ಷಣ ಬೇಡ ಅನ್ನೋದಕ್ಕೆ ನಾನು ಸಮ್ಮತಿಸುತ್ತೇನೆ. ಆದರೆ ಕಾರ್ಪೊರೇಟ್ ಆಪ್ ನ್ನು ಯಾಕೆ ಬ್ಯಾನ್ ಮಾಡಲ್ಲ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.








