IND vs SL T20I Series: ಚೊಚ್ಚಲ ಪಂದ್ಯದಲ್ಲೇ ಶೈನ್ ಆದ ಶಿವಂ ಮಾವಿ..!!
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ರನ್‌ಗಳ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ 2023ರ ಕ್ರಿಕೆಟ್ ಪಯಣವನ್ನ ಗೆಲುವಿನೊಂದಿಗೆ ಆರಂಭಿಸಿದೆ. ಕೊನೆಯ ಓವರ್‌ವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಭಾರತ ಗೆಲುವಿನ ನಗೆಬೀರಿದರೆ. ಚೊಚ್ಚಲ ಟಿ20 ಪಂದ್ಯದಲ್ಲೇ ಅದ್ಭುತ ಬೌಲಿಂಗ್‌ನಿಂದ ಮಿಂಚಿದ ಶಿವಂ ಮಾವಿ ಭಾರತಕ್ಕೆ ಭರವಸೆಯ ಬೌಲರ್ ಆಗುವ ವಿಶ್ವಾಸ ಮೂಡಿಸಿದ್ದಾರೆ.
ಮುಂಬೈನ ಐತಿಹಾಸಿಕ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಯುವ ವೇಗಿ ಶಿವಂ ಮಾವಿ ತಮಗೆ ದೊರೆತ ಅವಕಾಶವನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮಿಂಚಿದರು. ಮೊದಲ ಓವರ್‌ನಿಂದಲೇ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದ ಮಾವಿ, 4 ಓವರ್‌ಗಳಲ್ಲಿ 22 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಿನ ಹೀರೋ ಆದರು.
ತಮ್ಮ ಈ ಪ್ರದರ್ಶನದೊಂದಿಗೆ ಭಾರತದ ಪರ ಪಾದಾರ್ಪಣೆ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ 3ನೇ ಬೌಲರ್ ಎಂಬ ಹೆಗ್ಗಳಿಕೆಗೆ ಶಿವಂ ಮಾವಿ ಪಾತ್ರರಾಗಿದ್ದಾರೆ. ಶಿವಂ ಮಾವಿ ಅವರಿಗೂ ಮೊದಲು ಬರೀಂದರ್ ಸ್ರಾನ್ ಚೊಚ್ಚಲ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಎನಿಸಿದ್ದಾರೆ.
2016ರಲ್ಲಿ ಟೀಂ ಇಂಡಿಯಾ ಪರ ಆಡುವ ಅವಕಾಶ ಪಡೆದ ಸ್ರಾನ್, ಜಿಂಬಾಬ್ವೆ ವಿರುದ್ಧ 10 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇದಕ್ಕೂ ಮುನ್ನ 2009ರಲ್ಲಿ ಬಾಂಗ್ಲಾದೇಶ ವಿರುದ್ಧ ಪ್ರಜ್ಞಾನ್ ಓಜಾ 21 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇದೀಗ ಈ ಸಾಲಿಗೆ ಶಿವಂ ಮಾವಿ ಅವರು ಸೇರ್ಪಡೆಯಾಗಿದ್ದಾರೆ.








