ಬೆಂಗಳೂರು : ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಇದರ ಮಧ್ಯೆ ದೇಶದಲ್ಲಿ ಮತ್ತೆ ಲಾಕ್ ಡೌನ್ ಜಾರಿ ಆಗುತ್ತೆ ಎಂಬ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಕ್ವೀನ್ಸ್ ರಸ್ತೆಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಮತ್ತೆ ಜಾರಿಗೆ ತರುವುದು ಬಿಡುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು. ಸರ್ಕಾರ ಜನರ ಬಗ್ಗೆ ಕಾಳಜಿ ಬಗ್ಗೆ ಜವಾಬ್ದಾರಿ ಹೊಂದಿದೆ. ಸಚಿವರು, ಅಧಿಕಾರಿಗಳು ಇದ್ದಾರೆ. ಅವರೆಲ್ಲಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ, ನೋಡುತ್ತೇವೆ. ಅವರು ನೀಡುವ ಪ್ರಸಾದವನ್ನು ಸ್ವೀಕರಿಸುವುದಷ್ಟೇ ನಮ್ಮ ಪಾಲಿನದ್ದು ಎಂದು ಮಾರ್ಮಿಕವಾಗಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಮುಂದುವರಿದು, ನಮ್ಮ ಎಲ್ಲಾ ರಾಷ್ಟ್ರೀಯ ನಾಗರಿಕರಿಗೂ ನಮ್ಮ ಶಾಸಕರು, ಕಾರ್ಯಕರ್ತರಿಗೂ ಒಳ್ಳೆಯದಾಗಲಿ. ಪ್ರಸ್ತುತ ಎದುರಾಗಿರುವ ಕೊರೊನಾ ಸಂಕಷ್ಟ ದೂರವಾಗಲಿ. ಲೋಕ ಕಲ್ಯಾಣವಾಗಲಿ ಎಂದು ಎಲ್ಲಾ ಧರ್ಮವನ್ನು ಗಮನದಲ್ಲಿಟ್ಟುಕೊಂಡು ಪೂಜೆ ಮಾಡಿದ್ದೇವೆ ಎಂದ ಟ್ರಬಲ್ ಶೂಟರ್, ಕೆಪಿಸಿಸಿ ಅಧ್ಯಕ್ಷರಾಗಿ ಪ್ರತಿಜ್ಞಾ ಕಾರ್ಯಕ್ರಮದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ, ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷರು, ಶಾಸಕ ಮಿತ್ರರನ್ನು ಚರ್ಚಿಸಬೇಕಾಗಿದೆ. ಇನ್ನೊಂದೆರಡು ದಿನದಲ್ಲಿ ದಿನಾಂಕವನ್ನು ನಿಗದಿಪಡಿಸುವುದಾಗಿ ತಿಳಿಸಿದರು.








