ಪ್ರಧಾನಿ ನರೇಂದ್ರ ಮೋದಿ ಅವರ ಮುಖ ಮುದ್ರಿತ ಮಾಸ್ಕ್ ಗೆ ಭಾರೀ ಬೇಡಿಕೆ

ಭೋಪಾಲ್, ಜೂನ್ 17: ದೇಶದಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಬಳಸುವುದು ಅತ್ಯಂತ ಮುಖ್ಯ. ಹಾಗಾಗಿ ಎಲ್ಲೆಡೆಯೂ ಮಾಸ್ಕ್ ಗೆ ಬೇಡಿಕೆ ಹೆಚ್ಚಿದ್ದು, ಮಾಸ್ಕ್ ಮಾರಾಟಗಾರರು ಮಾಸ್ಕ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಚಿಹ್ನೆ ಮುದ್ರಿತ ಮಾಸ್ಕ್ ಗಳನ್ನು ಧರಿಸುತ್ತಿದ್ದು, ಅದೇ ಒಂದು ಟ್ರೆಂಡ್ ಆಗುತ್ತಿದೆ.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಮುಖ ಮುದ್ರಿತವಾಗಿರುವ ಮಾಸ್ಕ್ ಭೋಪಾಲ್ ನಗರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚು ಖರೀದಿಯಾಗುತ್ತಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಇಲ್ಲಿಯವರೆಗೆ 500-1000 ಪ್ರಧಾನಿ ಮೋದಿ ಅವರ ಮುಖ ಮುದ್ರಿತವಾಗಿರುವ ಮಾಸ್ಕ್ ಮಾರಾಟವಾಗಿರುವುದಾಗಿ ಮತ್ತು ಅದಕ್ಕೆ ಭಾರೀ ಬೇಡಿಕೆ ಇರುವುದಾಗಿ ಅಂಗಡಿ ಮಾಲೀಕ ಕುನಲ್ ಪರಿಯಾನಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಮುಖ ಮುದ್ರಿತವಾಗಿರುವ ಮಾಸ್ಕ್ ಮಾತ್ರವಲ್ಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಮುಖ ಮುದ್ರಿತವಾಗಿರುವ ಮಾಸ್ಕ್ ಸಹ ಲಭ್ಯವಿದೆ ಎಂದು ಅಂಗಡಿ ಮಾಲೀಕ ತಿಳಿಸಿದ್ದಾರೆ.
ಇಲ್ಲಿಯವರೆಗೆ ಮಧ್ಯ ಪ್ರದೇಶದಲ್ಲಿ ಒಟ್ಟು 10,935 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 465 ಮಂದಿ ಸಾವನ್ನಪ್ಪಿದ್ದಾರೆ. ಭೋಪಾಲ್ ನಗರದಲ್ಲಿ 2235 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 72 ಮಂದಿ ಮೃತಪಟ್ಟಿದ್ದಾರೆ.








