ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ವಿರುದ್ಧ ಬರೆದಿರುವ ಪತ್ರದ ಕುರಿತು ಪೊಲೀಸರಿಗೆ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪತ್ರ ಅಸಲಿ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ರಾಮನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಅವರು ಪತ್ರವನ್ನು ಅಧಿಕಾರಿಗಳು ಬರೆದಿಲ್ಲ ಎಂದು ದೂರು ನೀಡಿದ್ದಾರೆ. ಹೀಗಾಗಿ ಈ ಪತ್ರವನ್ನು ಯಾರು ಬರೆದಿದ್ದಾರೆ. ಯಾವ ಕಾರಣಕ್ಕೆ ಬರೆದಿದ್ದಾರ ಎಂಬುವುದನ್ನು ಪೊಲೀಸರು ತನಿಖೆ ಮಾಡಿ ಸತ್ಯ ಬಯಲಿಗೆಳೆಯಲು ಸೂಚಿಸಲಾಗಿದೆ ಎಂದರು.
ಬಿಬಿಎಂಪಿ ಗುತ್ತಿಗೆದಾರರು ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕೆಲಸ ನಿಲ್ಲಿಸಿ ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕೆಲಸ ನಿಲ್ಲಿಸಿಲ್ಲ. ತನಿಖೆಯಾಗಬೇಕೆಂದು ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದಾರೆ. ಬಿಬಿಎಂಪಿ, ಬಿಡಿಎ ನಲ್ಲಿ ಕೆಲಸಗಳಾಗಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತನಿಖೆ ಮಾಡಿಸಲಾಗುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಉಡುಪಿ ವೀಡಿಯೋ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು ನಿನ್ನೆ ಆದೇಶವಾಗಿದೆ. ಡಿವೈಎಸ್ಪಿ ಮಟ್ಟದ ಅಧಿಕಾರಿಗೆ ತನಿಖೆ ಮಾಡಲು ಸೂಚಿಸಲಾಗಿತ್ತು. ಆದರೆ ಇನ್ನೂ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಸಿಐಡಿ ಗೆ ವಹಿಸಲಾಗಿದೆ.








