ರಾಯಚೂರು : ಮತ್ತೊಂದು ಮದುವೆಗೆ ನಿರ್ಧರಿಸಿದ್ದ ಪಾಪಿಯೊಬ್ಬ, ತನ್ನ ವಿವಾಹಕ್ಕೆ ಅಡ್ಡಿಯಾಗುತ್ತದೆ ಎಂದು 14 ತಿಂಗಳ ಹಸುಗೂಸನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ರಾಯಚೂರು (Raicur) ಜಿಲ್ಲೆಯ ಲಿಂಗಸುಗೂರು (Lingasur) ತಾಲೂಕಿನ ಕನಸಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 14 ತಿಂಗಳ ಅಭಿನವ್ ಕೊಲೆಯಾದ ದುರ್ದೈವಿ. ಮಹಾಂತೇಶ್ ತನ್ನ ಮಗುವನ್ನೇ ಕೊಲೆ ಮಾಡಿರುವ ಪಾಪಿ ಎನ್ನಲಾಗಿದೆ. ಮತ್ತೊಂದು ಮದುವೆಯಾಗುವ ಆಸೆಯಿಂದ ಮಗುವನ್ನು ಕೊಂದು ಕಲ್ಲಿನ ಅಡಿಯಲ್ಲಿ 3 ದಿನ ಮುಚ್ಚಿಟ್ಟಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಪರ ಪುರುಷನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಮಹಾಂತೇಶ್ ಮತ್ತೊಂದು ಮದುವೆಗೆ ತಯಾರಿ ನಡೆಸಿದ್ದ ಎನ್ನಲಾಗಿದೆ. ಮದುವೆಗೆ ಮಗು ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.








