ಏಕದಿನ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಅಫ್ಘಾನಿಸ್ತಾನದ ವೇಗದ ಬೌಲರ್ ಫಜ಼ಲ್ಹಕ್ ಫಾರೂಕಿ(4/34) ಹೊಸ ಇತಿಹಾಸ ಬರೆದಿದ್ದಾರೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಪ್ರದರ್ಶಿಸಿದ ಫಾರೂಕಿ, ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಇನ್ನಿಂಗ್ಸ್ ಆರಂಭದಿಂದಲೇ ಲಂಕಾ ಪಡೆಯ ಬ್ಯಾಟಿಂಗ್ ಬೆನ್ನೆಲುಬು ಮುರಿದ ಎಡಗೈ ವೇಗಿ, ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು.

ಶ್ರೀಲಂಕಾ ವಿರುದ್ಧ ಈ ಪ್ರದರ್ಶನದೊಂದಿಗೆ ಫಜ಼ಲ್ಹಕ್ ಫಾರೂಕಿ, ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಪರ 2ನೇ ಬೌಲಿಂಗ್ ಪ್ರದರ್ಶನ ನೀಡಿದರು. ಅಲ್ಲದೇ ವಿಶ್ವಕಪ್‌ನಲ್ಲಿ ಈವರೆಗೂ 4 ವಿಕೆಟ್‌ಗಳನ್ನ ಪಡೆದ ಅಫ್ಘಾನಿಸ್ತಾನದ 3ನೇ ಬೌಲರ್ ಎಂಬ ಹೆಗ್ಗಳಿಕೆಗೂ ಫಾರೂಕಿ ಭಾಜನರಾದರು. ಈ ಮೊದಲು ಅಫ್ಘಾನ್ ತಂಡದ ಮೊಹಮ್ಮದ್ ನಬಿ, ಶಾಪೂರ್ ಜದ್ರಾನ್ ಅವರುಗಳು 4 ವಿಕೆಟ್‌ಗಳನ್ನ ಪಡೆದು ವಿಶ್ವಕಪ್‌ನಲ್ಲಿ ದಾಖಲೆ ಬರೆದಿದ್ದರು.
ಇದೀಗ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 10 ಓವರ್‌ಗಳಲ್ಲಿ 34 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಫಾರೂಕಿ ಸಹ ಈ ಸಾಧನೆ ಮಾಡಿದ್ದಾರೆ. ಲಂಕಾ ತಂಡದ ಪ್ರಮುಖ ಬ್ಯಾಟರ್‌ಗಳಾದ ಕರುಣಾರತ್ನೆ, ಅಸಲಂಕಾ, ಮ್ಯಾಥೀವ್ಸ್ ಹಾಗೂ ತೀಕ್ಷಣ ಅವರುಗಳ ವಿಕೆಟ್ ಪಡೆಯುವ ಮೂಲಕ ಫಾರೂಕಿ, ಅಫ್ಘಾನ್ ತಂಡದ ಗೆಲುವಿನ ಹೀರೋ ಆದರು.
SL v AFG, Afghanistan, Sri Lanka, Fazalhaq Farooqi, CWC 2023








