ಹಬ್ಬಕ್ಕೆಂದು ಮಾವನ ಮನೆಗೆ ಬಂದಿದ್ದ ಅಳಿಯ ಹೆಣ್ಣು ಕೊಟ್ಟವನನ್ನೇ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದಲ್ಲಿ ನಡೆದಿದೆ. ಈರಪ್ಪ ಕೊಡ್ಲಿ ಕೊಲೆಯಾದ ವ್ಯಕ್ತಿ. ಇವರಿಗೆ ನಾಲ್ಕು ಜನ ಗಂಡು ಮಕ್ಕಳಿದ್ದು, ಓರ್ವ ಹೆಣ್ಣು ಮಗಳಿದ್ದರು. ಕಳೆದ 6 ತಿಂಗಳ ಹಿಂದೆ ಸೋಲಾಪುರ ಮೂಲದ ರಾಜು ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ, ಅಳಿಯ ಹಾಗೂ ಮಗಳು ಚೆನ್ನಾಗಿಯೇ ಇದ್ದರು. ಮದುವೆಯಾಗಿ ಎರಡೂ ತಿಂಗಳು ಪತ್ನಿಯೊಂದಿಗೆ ಚೆನ್ನಾಗಿದ್ದ ರಾಜು, ಕುಡಿಯಲು ಆರಂಭಿಸಿದ್ದ. ಅಲ್ಲದೇ, ಪತ್ನಿಯ ಮೇಲೆ ದೈಹಿಕ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದಾಗಿ ಬೇಸತ್ತ ಪತ್ನಿ, ಕೆಲವು ದಿನಗಳಿಂದ ತವರು ಮನೆಗೆ ಬಂದಿದ್ದರು.
ಪತ್ನಿಯನ್ನ ತನ್ನ ಮನೆಗೆ ಕಳಿಸಿಕೊಡಿ ಎಂದು ರಾಜು ಹಲವು ಬಾರಿ ಕೇಳಿದ್ದ. ಆದರೆ, ಹಬ್ಬದ ನೆಪ ಮಾಡಿಕೊಂಡು ಮಾವನ ಮನೆಗೂ ಬಂದಿದ್ದ. ಆದರೆ, ಮಾವನೊಂದಿಗೆ ಜಮೀನಿಗೆ ಹೋಗಿ, ಅಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಘಟನೆ ಬೆಳಕಿಗೆ ಬಂದರೆ, ಜನರು ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿ, ವಿದ್ಯುತ್ ಕಂಬವೇರಿ ಹೈಟೆನ್ಯನ್ ವೈರ್ ಹಿಡಿದು ತಾನು ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಸುಲೇಪೇಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.








