ಯಾದಗಿರಿ: ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಂದಕಕ್ಕೆ ಉರುಳಿ ಬಿದ್ದ ಘಟನೆಯೊಂದು ನಡೆದಿದೆ.
ಈ ಘಟನೆ ಜಿಲ್ಲೆಯ ಸುರಪುರದ ದೇವಾಪುರದ ಬಳಿ ನಡೆದಿದ್ದು, ಓರ್ವ ಪ್ರಯಾಣಿಕ ಸಾವನ್ನಪ್ಪಿ, 25 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾಸಗಿ ಬಸ್ ಸುಮಾರು 30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.
ಹುಮನಬಾದ್ ನ ಹಳ್ಳಿಖೇಡ ನಿವಾಸಿ ಬಾಲು ಕುಮಾರ್ (36) ಸಾವನ್ನಪ್ಪಿದ ಪ್ರಯಾಣಿಕ ಎನ್ನಲಾಗಿದ್ದು, ಅಪಘಾತದಲ್ಲಿ (Accident) ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಖಾಸಗಿ ಬಸ್ ಬೀದರ್ ನಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವಾಹನದಲ್ಲಿ 40 ಜನ ಪ್ರಯಾಣಿಕರು ತೆರಳುತ್ತಿದ್ದರು ಎನ್ನಲಾಗಿದೆ.
ಚಾಲಕನ ಅತಿಯಾದ ವೇಗವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








