ರಾಯಚೂರು: ಆಸ್ಪತ್ರೆಗೆ ತೆರಳಿದ್ದ ತಾಯಿ ಹಾಗೂ ಮಗನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆಯೊಂದು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.
ಸಂಜೆಯ ವೇಳೆಗೆ ತಾಯಿ ಹಾಗೂ ಮಗನ ಮೇಲೆ ನಾಯಿ ದಾಳಿ ನಡೆಸಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಾಯಿ ಗಂಗಮ್ಮ(36), ಮಗ ಪ್ರೀತಂ(15) ಮೇಲೆಯೇ ದಾಳಿ ನಡೆಸಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಯಿ ಮೊದಲು ಮಗನ ಮೇಲೆ ದಾಳಿ ನಡೆಸಿದೆ. ಕೂಡಲೇ ತಾಯಿ ಮಗನ ಸಹಾಯಕ್ಕೆ ಧಾವಿಸಿದ್ದಾಳೆ. ರಕ್ಷಿಸಲು ಹೋದ ತಾಯಿ ಗಂಗಮ್ಮ ಅವರಿಗೂ ಬೀದಿ ನಾಯಿ ಕಚ್ಚಿದೆ. ಕೂಡಲೇ ಸ್ಥಳೀಯರು ಬಂದು ನಾಯಿಯನ್ನು ಓಡಿಸಿದ್ದಾರೆ. ಸದ್ಯ ಇಬ್ಬರೂ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀದಿ ನಾಯಿ ಹಾವಳಿ ತಪ್ಪಿಸುವಂತೆ ತಾಲೂಕು ಆಡಳಿತಕ್ಕೆ ಸ್ಥಳೀಯರು ಮನವಿ ಮಾಡಿದ್ದಾರೆ.








