ಹುಬ್ಬಳ್ಳಿ: ಇತ್ತೀಚೆಗೆ ಸೈಬರ್ ವಂಚಕರ (Cyber Crime) ಬಲೆಗೆ ಪ್ರಜ್ಞಾವಂತರೇ ಹೆಚ್ಚಾಗಿ ಬಲಿಯಾಗುತ್ತಿದ್ದು, ವೈದ್ಯರೊಬ್ಬರು ಭಾರೀ ಹಣವನ್ನು ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ.
ಧಾರವಾಡದ (Dharawad) ವೈದ್ಯರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಸದ್ಯ 1.79 ಕೋಟಿ ರೂ. ಕಳೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರ ಕರೆಯಿಂದಾಗಿ ಹಣ ಕಳೆದುಕೊಂಡಿದ್ದು, ಗ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಫೋನ್ ಕರೆ ಮಾಡಿದ್ದ ಸೈಬರ್ ವಂಚಕ, ಹಣಕಾಸು ಸಲಹೆಗಾರ ಎಂದು ನಂಬಿಸಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ತನ್ನ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡಲಾಗುವುದು ಎಂದು ಹೇಳಿ ಆತ ನಂಬಿಸಿದ್ದಾನೆ. ಅಲ್ಲದೇ, ಆತ ಲಾಭಕ್ಕಾಗಿ ‘ಪ್ಲಾನೆಟ್ ಇಮೇಜ್ ಇಂಟರ್ನ್ಯಾಷನಲ್’ ಕಂಪನಿಯ ಐಪಿಒ (IPO) ದಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದ್ದಾನೆ. ಆತನ ಸಲಹೆ ನಂಬಿ ವೈದ್ಯರು ಆತನ ಸಾಮಾಜಿಕ ಮಾಧ್ಯಮ ತಾಣಕ್ಕೆ ಸೇರಿಕೊಂಡಿದ್ದಾರೆ.
ಆನಂತರ ಅವರು ವೈದ್ಯರ ಬ್ಯಾಂಕ್ ಡೇಟಾ ತೆಗೆದುಕೊಂಡು ವೈದ್ಯರಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ 1.79 ಕೋಟಿ ರೂ. ಎಗರಿಸಿದ್ದಾರೆ. ಸದ್ಯ ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.