ಬೆಂಗಳೂರು: ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಮಾಡಿರುವ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆ ನಡೆಯುತ್ತಿದ್ದಂತೆ ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು. ಸದ್ಯ ಈ ಘಟನೆಯ ಹಿಂದಿನ ಕಾರಣಗಳು ಬೆಳಕಿಗೆ ಬಂದಿವೆ.
ಕೊಲೆಯಾಗಿರುವ ಮಹಿಳೆ ಹಾಗೂ ಆರೋಪಿ ಇಬ್ಬರು ಬೇರೆ ಬೇರೆ ಮದುವೆಯಾದವರು. ಆದರೆ, ಇಬ್ಬರೂ ತಮ್ಮ ಪತಿ ಹಾಗೂ ಪತ್ನಿ ವಿಚ್ಛೇದನ ನೀಡದೆ ಲೀವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಆದರೆ, ಆರೋಪಿಗೆ ಎರಡನೇ ಪತ್ನಿಯ ಮೇಲೆ ಸಂಶಯ ಮೂಡಿದೆ. ಜೊತೆಗೆ ಮಲ ಮಗಳ ಮೇಲೆಯೂ ಅನುಮಾನ ಮೂಡಿದೆ. ಇದೇ ಅನುಮಾನ ತ್ರಿಬಲ್ ಮರ್ಡರ್ ಗೆ ಕಾರಣವಾಗಿದೆ.
ಸದ್ಯ ಪೊಲೀಸರು ಶರಣಾಗತಿಯಾಗಿದ್ದ ಆರೋಪಿ ಗಂಗರಾಜುನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇವರ ಮನೆಗೆ ಇತ್ತೀಚೆಗಷ್ಟೇ ಬಂದಿದ್ದ ಮೃತ ಭಾಗ್ಯಮ್ಮಳ ಅಕ್ಕನ ಮಗಳು ಹೇಮಾವತಿ ನಡತೆ ಮೇಲೆಯೂ ಆರೋಪಿಗೆ ಅನುಮಾನ ಮೂಡಿತ್ತು. ಇದೇ ವಿಚಾರವಾಗಿ ಬುಧವಾರ ಮನೆಯಲ್ಲಿ ಗಲಾಟೆ ನಡೆದಿದೆ.
ಗಲಾಟೆಯ ನಂತರ ಆರೋಪಿಯು ಕೊಲೆಗೆ ಸಂಚು ರೂಪಿಸಿದ್ದಾನೆ. ಆನಂತರ ಹೆಸರಘಟ್ಟಕ್ಕೆ ತೆರಳಿ ರೈತರ ಸಂತೆಯಲ್ಲಿ ಮಚ್ಚು ಖರೀದಿ ಮಾಡಿದ್ದ. ರೈತರು ಬಳಸುವ ಹರಿತವಾದ ಮಚ್ಚನ್ನು 500 ರೂ. ಕೊಟ್ಟು ಖರೀದಿಸಿ ಮನೆಗೆ ತಂದಿದ್ದ. ಪತ್ನಿ ಮನೆಯಲ್ಲಿ ಇಲ್ಲದ್ದನ್ನ ಮೊದಲೇ ತಿಳಿದು ಒಬ್ಬೊಬ್ಬರನ್ನೇ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾನೆ. ಮನೆಗೆ ಬರುತ್ತಿದ್ದಂತೆ ಮತ್ತೆ ಗಲಾಟೆ ತೆಗೆದು ಮೊದಲ ಮಲ ಮಗಳಾದ ನವ್ಯಳ ಕತ್ತಿಗೆ ಮಚ್ಚು ಬೀಸಿದ್ದಾನೆ. ಅಡ್ಡ ಬಂದಿದ್ದ ಸಂಬಂಧಿ ಹೇಮಾವತಿಯ ಮೇಲೆಯೂ ದಾಳಿ ಮಾಡಿದದಾನೆ. ಇಬ್ಬರ ರುಂಡ ಮುಂಡ ಬೇರ್ಪಡಿಸಿ ಬಿಸಾಡಿದ್ದಾನೆ.
ಆನಂತರ ಪತ್ನಿ ಮನೆಗೆ ಬಂದಿದ್ದು, ರಕ್ತದ ಮಡುವಿನಲ್ಲಿದ್ದ ಮಗಳನ್ನ ನೋಡಿ ಕಿರುಚಾಡಿದ್ದಾಳೆ. ಕೂಡಲೇ ಮಹಿಳೆಯ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.