ಥಾಣೆ: ವೈದ್ಯರು ಯಶಸ್ವಿ ಚಿಕಿತ್ಸೆಯೊಂದನ್ನು ಮಾಡಿದ್ದು, ಮಹಿಳೆಯ ದೇಹದಿಂದ 10 ಕೆಜಿ ಗೆಡ್ಡೆ ಹೊರ ತೆಗೆದಿದ್ದಾರೆ.
ಮಹಾರಾಷ್ಟ್ರದ ಥಾಣೆಯ (Thane, Maharastra) ಸಿವಿಲ್ ಆಸ್ಪತ್ರೆಯ ವೈದ್ಯರಿಂದ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದೆ. ಮಹಿಳೆಯ ಹೊಟ್ಟೆಯಿಂದ 10 ಕೆ.ಜಿ ಗೆಡ್ಡೆಯನ್ನು (ನೀರು ತುಂಬಿದ ಮಾಂಸದ ಉಂಡೆ) ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಉಲ್ಲಾಸನಗರ ಪ್ರದೇಶದಲ್ಲಿ ತರಕಾರಿ ಮಾರುತ್ತಿದ್ದ 48 ವರ್ಷದ ಮಹಿಳೆಯೊಬ್ಬರು 6 ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆರ್ಥಿಕ ಸ್ಥಿತಿ ಸರಿ ಇಲ್ಲದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಆದರೆ, ನೋವು ಹೆಚ್ಚಾಗಿದ್ದರಿಂದಾಗಿ ಉಲ್ಲಾಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ದಾಖಲಾಗಿದ್ದಾರೆ.
ಆದರೆ, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜನವರಿ 20 ರಂದು ಥಾಣೆ ಸಿವಿಲ್ ಆಸ್ಪತ್ರೆಗೆ ಕಳುಹಿಸಿದ್ದರು. ಆಗ ಗೆಡ್ಡೆ ಇರುವುದು ಕಂಡು ಬಂದಿದೆ. ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೈಲಾಸ್ ಪವಾರ್ ಹಾಗೂ ಹೆಚ್ಚುವರಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಧೀರಜ್ ಮಹಾಂಗಡೆ ಮಾರ್ಗದರ್ಶನದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ, 10 ಕೆಜಿ ತೂಕದ ನೀರು ತುಂಬಿದ ಮಾಂಸದ ಗೆಡ್ಡೆಯನ್ನು ಹೊರತೆಗೆಯಲಾಗಿದೆ.