ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಈಗ ಮಥುರಾದ ಕೃಷ್ಣನ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಥುರಾದಲ್ಲಿ ಕೃಷ್ಣ ದೇವಸ್ಥಾನ (Krishna Janmabhoomi in Mathura) ನಾಶ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹೇಳಿದೆ.
ಉತ್ತರ ಪ್ರದೇಶದ ಮೈನ್ಪುರಿ ನಿವಾಸಿ ಅಜಯ್ ಪ್ರತಾಪ್ ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ಕೇಳಿದ ಪ್ರಶ್ನೆಗೆ ಈ ಕುರಿತು ಉತ್ತರ ನೀಡಿದೆ. ಪ್ರಶ್ನೆಯಲ್ಲಿ 1670ರಲ್ಲಿ ಕೇಶವದೇವ ದೇವಸ್ಥಾನವನ್ನು ಕೆಡವಿ ಶಾಹಿ ಈದ್ಗಾ ನಿರ್ಮಾಣವಾದ ಕುರಿತು 1920ರ ನವೆಂಬರ್ನಲ್ಲಿ ಬ್ರಿಟಿಷರು (British) ನಡೆಸಿದ ಸರ್ವೆ ಮಾಹಿತಿ ನೀಡುವಂತೆ ಕೇಳಲಾಗಿತ್ತು.
1920 ರಲ್ಲಿ ಅಲಹಾಬಾದ್ನಿಂದ ಬ್ರಿಟಿಷರು ಪ್ರಕಟಿಸಿದ ಗೆಜೆಟ್ನಲ್ಲಿ (ರಾಜ್ಯಪತ್ರ) ಲೋಕೋಪಯೋಗಿ ಇಲಾಖೆ ಉತ್ತರ ಪ್ರದೇಶದ (Uttar Pradesh) ವಿವಿಧೆಡೆ 39 ಸ್ಮಾರಕಗಳ ಪಟ್ಟಿ ನೀಡಿದೆ. ಈ ಪಟ್ಟಿಯಲ್ಲಿ ಕತ್ರಾ ಕೇಶವ ದೇವ್ ಭೂಮಿಯಲ್ಲಿರುವ ಕೃಷ್ಣ ಭೂಮಿಯನ್ನು 37ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಹಿಂದೆ ಕತ್ರಾ ದಿಬ್ಬದ ಮೇಲೆ ಕೇಶವದೇವ್ ದೇವಸ್ಥಾನವಿತ್ತು. ಅದನ್ನು ನಾಶ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬ ಉತ್ತರ ಸಿಕ್ಕಿದೆ.
ಎಎಸ್ಐ ನೀಡಿದ ಮಾಹಿತಿಯನ್ನೇ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಸಾಕ್ಷ್ಯವಾಗಿ ಸೇರಿಸುತ್ತೇವೆ ವಕೀಲರು ತಿಳಿಸಿದ್ದಾರೆ. ಕೇಶವದೇವ ದೇವಾಲಯವನ್ನು ಸುಮಾರು 5000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತಿದೆ. ಮಥುರಾ ಶ್ರೀಕೃಷ್ಣನ ಜನ್ಮಸ್ಥಳ. ಶ್ರೀಕೃಷ್ಣನ ಮೊಮ್ಮಕ್ಕಳಾದ ವ್ರಜ ಮತ್ತು ವ್ರಜನಾಭ ರಾಜ ಪರೀಕ್ಷಿತನ ಸಹಾಯದಿಂದ ಮಥುರಾದಲ್ಲಿ ಕೇಶದೇವ ದೇವಾಲಯ ನಿರ್ಮಿಸಿದರು ಎಂಬ ಕಥೆಯಿದೆ. ಆದರೆ, ಮೊಘಲ್ ಔರಂಗಜೇಬ್ (Aurangzeb) 1670ರಲ್ಲಿ ಕೇಶವದೇವನ ದೇವಾಲಯ ಕೆಡವಲು ಆದೇಶಿಸಿದ್ದ. ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ನಿರ್ಮಿಸಲಾದ ಮಸೀದಿಯಲ್ಲಿ ಔರಂಗಜೇಬ ಸ್ವತಃ ನಮಾಜ್ ಮಾಡಿದ್ದ ಎನ್ನಲಾಗಿದೆ.
ಈ ವಿವಾದವು 13.37 ಎಕರೆ ಭೂಮಿಯ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದೆ. ಷ್ಣ ಜನ್ಮಭೂಮಿ 10.9 ಎಕರೆ ಜಮೀನು ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿ ಎರಡೂವರೆ ಎಕರೆ ಜಮೀನು ಹೊಂದಿದೆ. ಪ್ರಸ್ತುತ ಈಗ ಇರುವ ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ ಅದನ್ನು ನೆಲಸಮಗೊಳಿಸಬೇಕು. 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.








