ಯಾದಗಿರಿ: ಗ್ರಾಪಂ ಸದಸ್ಯನೊಬ್ಬ ಬರೋಬ್ಬರಿ 120 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿಕೊಂಡಿರುವ ಆರೋಪವೊಂದು ಕೇಳಿ ಬಂದಿದೆ.
ಯಾದಗಿರಿಯ (Yadgir) ಗುರುಮಠಕಲ್‍ನ (Gurumitkal) ಬದ್ದೆಪಲ್ಲಿ ಗ್ರಾಮದಲ್ಲಿಯೇ ಈ ಆರೋಪ ಕೇಳಿ ಬಂದಿದ್ದು, ಇಲ್ಲಿ ಸರ್ಕಾರವು ನೂರಾರು ಎಕರೆ ಜಮೀನಿನಲ್ಲಿ ಕೆರೆ ನಿರ್ಮಾಣ ಮಾಡಿತ್ತು. ಆದರೆ, ಕಳೆದ 15 ವರ್ಷಗಳಿಂದ ಗ್ರಾಪಂ ಮಾಜಿ ಸದಸ್ಯನೊಬ್ಬ 120 ಎಕರೆ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿಕೊಂಡಿದ್ದಾನೆ. ಅಲ್ಲದೇ, ಈ ಭೂಮಿಯನ್ನು ಲಕ್ಷ ಲಕ್ಷ ಪಡೆದು ಲೀಸ್ ಗೆ ನೀಡಿದ್ದಾನೆ ಎನ್ನಲಾಗಿದ್ದು, ಈ ಕೆರೆಯನ್ನೇ ನಂಬಿದ್ದ ರೈತರು ಸಂಕಷ್ಟ ಪಡುವಂತಾಗಿದೆ.
ಬದ್ದೆಪಲ್ಲಿ ಗ್ರಾಮದಲ್ಲಿ ಸರ್ಕಾರ 140 ಎಕರೆ ಜಮೀನಿನಲ್ಲಿ ಕೆರೆ ನಿರ್ಮಾಣ ಮಾಡಲಾಗಿತ್ತು. ಇದರಿಂದಾಗಿ ರೈತರಿಗೆ ತುಂಬಾ ಅನುಕೂಲವಾಗಿತ್ತು. ಗ್ರಾಪಂನ ಮಾಜಿ ಸದಸ್ಯ ಅಭಿಮನ್ಯು ಸರ್ಕಾರಿ ಜಮೀನು ಕಬಳಿಕೆ ಮಾಡಿಕೊಂಡಿದ್ದಾನೆ. ಕೆರೆಗೆ ಹತ್ತಿರದಲ್ಲೇ ಆತನ 20 ಎಕರೆ ಜಮೀನಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಬೇಸಿಗೆಯಲ್ಲಿ ಕೆರೆಯ ನೀರನ್ನು ಖಾಲಿ ಮಾಡುತ್ತ, 15 ವರ್ಷಗಳಲ್ಲಿ ಕೆರೆಯನ್ನು ಒತ್ತುವರಿ ಮಾಡಿಕೊಳ್ಳುತ್ತ ಇಲ್ಲಿಯವರೆಗೆ 120 ಎಕರೆ ಜಮೀನನ್ನು ಕಬಳಿಸಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸದ್ಯ ಅಲ್ಲಿ ವಾಣಿಜ್ಯ ಬೆಳೆ ಖರ್ಬೂಜ ಬೆಳೆಯುತ್ತಿದ್ದಾನೆ. ಸರ್ಕಾರ ಕಳೆದ ವರ್ಷ ಗ್ರಾಮದ ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುವಂತೆ ಅನುಕೂಲಕ್ಕಾಗಿ ಕೆರೆ ಮಾಡಿದ್ದರೆ, ಈತ ಕಬಳಿಸಿದ್ದಾನೆ ಎಂದು ರೈತರು ಆರೋಪಿಸಿದ್ದಾರೆ. ಅಲ್ಲದೇ, ಜಮೀನನ್ನು ಆಂಧ್ರ ಪ್ರದೇಶ ಮೂಲದ ವ್ಯಕ್ತಿಯಿಂದ ಲಕ್ಷ ಲಕ್ಷ ಹಣ ಪಡೆದು ಲೀಸ್‍ಗೆ ನೀಡಿದ್ದಾನೆ ಎನ್ನಲಾಗಿದೆ. ಇಷ್ಟಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನ ವಹಿಸಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.








