ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರನ್ನು ಜಪ್ತಿ ಮಾಡಿದ ಪೊಲೀಸರು
ಚೆನ್ನೈ, ಜೂನ್ 26: ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಅವರಿಗೆ ಗುರುವಾರ ನಗರದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ 500 ರೂ. ದಂಡ ಮತ್ತು ಅವರ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.
56 ವರ್ಷದ ತಮಿಳುನಾಡಿನ ಮಾಜಿ ಆಟಗಾರ ತರಕಾರಿ ಖರೀದಿಸಲು ಕಾರಿನಲ್ಲಿ ಹೋಗಿದ್ದು, ನಿಯಮ ಉಲ್ಲಂಘನೆ ಮಾಡಿ ಪೊಲೀಸ್ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಮಿಳುನಾಡಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರವಾಗಿ ಹೆಚ್ಚಿರುವ ಹಿನ್ನಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲಿಸುವಂತೆ ಎಲ್ಲರಿಗೂ ಸೂಚಿಸಿದೆ. ಆದರೆ ರಾಬಿನ್ ಸಿಂಗ್ ಅದನ್ನು ಉಲ್ಲಂಘಿಸಿದ್ದರು.
ತಮಿಳುನಾಡಿನಲ್ಲಿ ಸರ್ಕಾರ ಕೊರೊನಾ ಸೋಂಕು ತಡೆಗಾಗಿ ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ನಿಯಮಾವಳಿ ಪ್ರಕಾರ ಅಗತ್ಯ ವಸ್ತುಗಳ ಖರೀದಿಗೆ 2 ಕಿ.ಮೀ. ಸುತ್ತಳತೆಯಲ್ಲಿ ಮಾತ್ರ ಜನರು ಸಂಚರಿಸಬಹುದಾಗಿದೆ. ಆದರೆ ರಾಬಿನ್ ಸಿಂಗ್ ಅಡ್ಯಾರ್ನಿಂದ 15 ಕಿ.ಮೀ.ಗೂ ಹೆಚ್ಚು ದೂರದ ಉತಾಂಡಿಗೆ ಕಾರಿನಲ್ಲಿ ಪ್ರಯಾಣಿಸಿದ್ದು, ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ ರಾಬಿನ್ ಸಿಂಗ್ ಅವರು ಈಸ್ಟ್ ಕೋಸ್ಟ್ ರೋಡ್ ನಿಂದ ಕಾರನ್ನು ಚಲಾಯಿಸಿಕೊಂಡು ಬಂದಿದ್ದು, ಅವರ ಬಳಿ ಪೊಲೀಸ್ ತಪಾಸಣೆ ಸಂದರ್ಭದಲ್ಲಿ ಇ-ಪಾಸ್ ಆಗಲಿ ಅಥವಾ ನಿಯಮವನ್ನು ಉಲ್ಲಂಘಿಸಿ ಕಾರಿನಲ್ಲಿ ಪ್ರಯಾಣಿಸುತ್ತಿರುವಂತಹ ತುರ್ತು ಏನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ಹಾಗಾಗಿ ಅವರಿಗೆ 500 ರೂ. ದಂಡ ಮತ್ತು ಅವರ ಕಾರನ್ನು ಜಪ್ತಿ ಮಾಡಲಾಗಿದೆ. ಪೊಲೀಸರೊಂದಿಗೆ ರಾಬಿನ್ ಸಿಂಗ್ ಬಹಳ ಸಭ್ಯ ರೀತಿಯಲ್ಲಿಯೇ ವರ್ತಿಸಿದಾಗಿ ಅವರು ಹೇಳಿದ್ದಾರೆ.
ಚೆನ್ನೈನಲ್ಲಿ ಕೊರೊನಾ ಪ್ರಕರಣ ತೀವ್ರ ಏರಿಕೆ ಕಂಡಿರುವ ಹಿನ್ನಲೆಯಲ್ಲಿ ಜೂನ್ 19ರಿಂದ 12 ದಿನಗಳ ಕಾಲ ಕಠಿಣ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ಗೂ ಮೊದಲೇ ಚೆನ್ನೈ ನಗರ ಪೊಲೀಸ್ ಆಯುಕ್ತ ಎ.ಕೆ.ವಿಶ್ವನಾಥನ್ ಅವರು ನಾಗರಿಕರಲ್ಲಿ ವಾಹನಗಳನ್ನು ಬಳಸದೆ ಮನೆ ಸಮೀಪದಲ್ಲೇ ಅಗತ್ಯವಸ್ತುಗಳನ್ನು ಖರೀದಿಸುವಂತೆ ಸೂಚಿಸಿದ್ದು, ಜಾರಿಯಲ್ಲಿರುವ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದರು.