ವಿದೇಶಿ ತಬ್ಲಿಘಿ ಜಮಾಅತ್ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದಲ್ಲಿ ಗಡೀಪಾರು ಮಾಡುವಂತಿಲ್ಲ – ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಜುಲೈ 3: ವಿದೇಶಿ ತಬ್ಲಿಘಿ ಜಮಾಅತ್ ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿದ್ದಲ್ಲಿ ಅವರನ್ನು ಗಡೀಪಾರು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಮಾರ್ಚ್ನಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದೇಶಿ ಪ್ರಜೆಗಳು ಅವರನ್ನು ಅವರವರ ದೇಶಕ್ಕೆ ಗಡೀಪಾರು ಮಾಡಬೇಕೆಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು.
ವಿದೇಶಿ ಪ್ರಜೆಗಳು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ ರಾಷ್ಟ್ರರಾಜಧಾನಿಯಲ್ಲಿ ಲಾಕ್ ಡೌನ್ ಆದ ಸಮಯದಲ್ಲಿ ತಬ್ಲಿಘಿ ಜಮಾಅತ್ ಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಅವರು ರಾಷ್ಟ್ರೀಯ ಭದ್ರತೆಗೆ ಹಾನಿ ಮಾಡಿದ್ದು, ಕೇಂದ್ರದ ಕ್ರಮದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.

ತಮ್ಮ ವೀಸಾಗಳನ್ನು ರದ್ದುಪಡಿಸಿರುವುದನ್ನು ಮತ್ತು ಕೇಂದ್ರ ಸರ್ಕಾರವು ಕಪ್ಪುಪಟ್ಟಿಗೆ ತಮ್ಮನ್ನು ಸೇರಿಸಿರುವುದನ್ನು ಪ್ರಶ್ನಿಸಿ 34 ರಾಷ್ಟ್ರಗಳ ವಿದೇಶಿ ಪ್ರಜೆಗಳು ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. ತಮ್ಮ ಪರ ವಕೀಲ ಸಿ.ಯು.ಸಿಂಗ್ ಮೂಲಕ, ಗಡಿ ಪಾರು ಯಾವುದೇ ಸರ್ಕಾರ ವೀಸಾ ಉಲ್ಲಂಘನೆಗಾಗಿ ತೆಗೆದುಕೊಳ್ಳುವ ಸಾಮಾನ್ಯ ಕ್ರಮವಾಗಿದೆ ಎಂದು ಮನವಿ ಸಲ್ಲಿಸಿದ ವಿದೇಶಿ ಪ್ರಜೆಗಳು “ದಯವಿಟ್ಟು ನಮ್ಮನ್ನು ನಮ್ಮ ದೇಶಗಳಿಗೆ ಗಡೀಪಾರು ಮಾಡಿ. ಯಾವುದೇ ನಿರ್ಬಂಧಗಳನ್ನು ವಿಧಿಸುವ ಮೊದಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ಏನೂ ತಪ್ಪು ಮಾಡದೆ ಇರುವಾಗ , ನಮ್ಮನ್ನು ಗಡೀಪಾರು ಮಾಡಲು ಕೇಂದ್ರವು ಪರಿಗಣಿಸಬಹುದು” ಎಂದು ವಿದೇಶಿ ಪ್ರಜೆಗಳು ಅರ್ಜಿ ಸಲ್ಲಿಸಿದರು. ಕಪ್ಪುಪಟ್ಟಿ ಎಂದರೆ ಭಾರತಕ್ಕೆ ಮರಳಲು ನಮಗೆ ಅವಕಾಶ ನೀಡಬಾರದು ಎಂಬುದಾಗಿದ್ದು, ಆದರೆ ನಮ್ಮನ್ನು ಗಡೀಪಾರು ಮಾಡಬಹುದು ಎಂದು ಅರ್ಜಿದಾರರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸಿದ್ದು, 2,679 ವಿದೇಶಿ ಪ್ರಜೆಗಳ ವಿರುದ್ಧ ವೈಯಕ್ತಿಕ ವೀಸಾಗಳನ್ನು ರದ್ದುಪಡಿಸಲಾಗಿದೆ ಮತ್ತು ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ (ಸಿಆರ್ಪಿಸಿ) ಅಡಿಯಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಾಗ ಮಾತ್ರ ಅವರಿಗೆ ಮನೆಗೆ ಹೋಗಲು ಅವಕಾಶವಿರುತ್ತದೆ. ಜಮಾಅತ್ ಕಾರ್ಯಕ್ರಮಕ್ಕೆ ಹಾಜರಾದ 47 ವಿದೇಶಿಯರು ಯಾವುದೇ ವೀಸಾ ಹೊಂದಿಲ್ಲದ ನೇಪಾಳ ಪ್ರಜೆಗಳು. ಉಳಿದ 39 ಪ್ರಕರಣಗಳ ವೀಸಾಗಳು ರದ್ದತಿಯ ಹಂತದಲ್ಲಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. 227 ವಿದೇಶಿ ಪ್ರಜೆಗಳು ಅವರ ವಿರುದ್ಧ ನೋಟಿಸ್ ನೀಡುವ ಮೊದಲೇ ಭಾರತವನ್ನು ತೊರೆದಿದ್ದಾರೆ ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ. ಕೇಂದ್ರವು ತನ್ನ ಅಫಿಡವಿಟ್ನಲ್ಲಿ, ಜಮಾಅತ್ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ವಿದೇಶಿ ಪ್ರಜೆಗಳು ವೀಸಾ ನಿಯಮಗಳು ಮತ್ತು ವಿದೇಶಿಯರ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದು, ಅಲ್ಲದೆ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ನಿಯಮಗಳನ್ನು ಸಹ ಉಲ್ಲಂಘಿಸಿದ್ದಾರೆ ಎಂದು ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ.
ಗಡೀಪಾರು ಮತ್ತು ವೀಸಾ ಅನುದಾನವನ್ನು ಹಕ್ಕು ಎಂದು ಹೇಳಲಾಗುವುದಿಲ್ಲ ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.
ವೀಸಾಗಳ ಅನುದಾನವು ಕೇಂದ್ರ ಸರ್ಕಾರದ ಸಾರ್ವಭೌಮ ಕಾರ್ಯವಾಗಿದೆ. ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲದಿದ್ದರೆ ಗಡೀಪಾರು ಮಾಡಲು ಅವಕಾಶ ನೀಡಬಹುದು. ಆದರೆ ಒಮ್ಮೆ ವಿದೇಶಿ ಪ್ರಜೆಯೊಬ್ಬರು ಪರ ದೇಶಕ್ಕೆ ಪ್ರವೇಶಿಸಿ ಆ ವ್ಯಕ್ತಿಯ ವಿರುದ್ಧ ಅಲ್ಲಿ ಕ್ರಿಮಿನಲ್ ಆರೋಪ ಹೊರಿಸಿದರೆ ಅವರನ್ನು ಗಡೀಪಾರು ಮಾಡಲಾಗುವುದಿಲ್ಲ ಎಂದು ಮೆಹ್ತಾ ಹೇಳಿದ್ದಾರೆ.
ನ್ಯಾಯಪೀಠವು ಕೇಂದ್ರದ ಕ್ರಮ ಸರಿಯಾಗಿದೆ ಎಂದು ಒಪ್ಪಿಗೆ ಸೂಚಿಸಿದ್ದು, ಕ್ರಿಮಿನಲ್ ಪ್ರಕರಣವಿದ್ದಲ್ಲಿ ಗಡೀಪಾರು ಮಾಡುವಂತಿಲ್ಲ. ಇದು ಕೇಂದ್ರ ಸರ್ಕಾರದ ವಿವೇಚನೆಯಾಗಿರುತ್ತದೆ ಎಂದು ಹೇಳಿದೆ.

ಆದರೆ, ಈ ಜನರು ರಾಜ್ಯದ ಭದ್ರತೆಗೆ ಧಕ್ಕೆ ತರುವಂತಹ ಗಂಭೀರ ತಪ್ಪು ಮಾಡಿಲ್ಲ. ಲಾಕ್ ಡೌನ್ ನಿರ್ಬಂಧಗಳು ಜಾರಿಯಾಗುವ ಮೊದಲು ಈ ಜನರು ಬಂದಿರುವುದರಿಂದ ಅವರನ್ನು ಗಡೀಪಾರು ಮಾಡಲು ಕೇಂದ್ರವು ಪರಿಗಣಿಸಬೇಕು ಎಂದು ವಿದೇಶಿ ಪ್ರಜೆಗಳ ಪರ ವಕೀಲರಾದ ಸಿ.ಯು.ಸಿಂಗ್ ಹೇಳಿದರು.
ಸುಮಾರು ಮೂವತ್ತೈದು ರಾಷ್ಟ್ರಗಳ ವಿದೇಶಿಯರನ್ನು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಅವಕಾಶವನ್ನು ನೀಡದೆ, ಸಾಮೂಹಿಕವಾಗಿ ಕಪ್ಪುಪಟ್ಟಿಗೆ ಸೇರಿಸಿರುವುದು, ಸಂವಿಧಾನದ 21 ನೇ ವಿಧಿಯ (ಜೀವನ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಉಲ್ಲಂಘನೆಯಾಗಿದೆ ಎಂದು ವಾದಿಸಿದ ವಿದೇಶಿ ಪ್ರಜೆಗಳ ಪರ ವಕೀಲ ಅಂತಹ ವಿದೇಶಿಯರ ವಿರುದ್ಧ ಎಫ್ಐಆರ್ ನೋಂದಣಿ ಮಾಡುವುದರ ಹೊರತಾಗಿ, ಹಠಾತ್ ಕಪ್ಪುಪಟ್ಟಿಗೆ ಸೇರಿಸುವುದರಿಂದ ಅವರ ಪಾಸ್ಪೋರ್ಟ್ಗಳನ್ನು ರಾಜ್ಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಇದರಿಂದಾಗಿ ವೈಯಕ್ತಿಕ ಸ್ವಾತಂತ್ರಕ್ಕೆ ದಕ್ಕೆ ಆಗುತ್ತದೆ ಎಂದು ವಾದ ಮಂಡನೆ ಮಾಡಿದರು.
ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠವು ಅರ್ಜಿದಾರರು ಕೇಂದ್ರ ಸರ್ಕಾರದ ಆದೇಶಗಳನ್ನು ಸಂಬಂಧಪಟ್ಟ ಹೈಕೋರ್ಟ್ ಮುಂದೆ ಪ್ರತ್ಯೇಕವಾಗಿ ಪ್ರಶ್ನಿಸುವುದು ಸೂಕ್ತವಾದ ಕ್ರಮ ಎಂದು ಅಭಿಪ್ರಾಯ ಪಟ್ಟಿದ್ದು, ಕೇಂದ್ರದ ಅಫಿಡವಿಟ್ ಗೆ ಪ್ರತಿಕ್ರಿಯೆಯಾಗಿ ಅರ್ಜಿದಾರರು ಮರುಜೋಡಣೆ ಅಫಿಡವಿಟ್ ಸಲ್ಲಿಸಲು ಈ ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಲಾಯಿತು.








