ಶ್ರೀನಗರ : ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕ ನಡುವೆ ನಡೆದ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಹುತಾತ್ಮರಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಲಡಾಖ್ ನ ಲೇಹ್ ಗೆ ದಿಢೀರ್ ಭೇಟಿ ನೀಡಿದ್ದಾರೆ.
ಪ್ರಧಾನಿಗಳು ಪ್ರಸ್ತುತ ಲಡಾಖ್ ನ ನಿಮುನಲ್ಲಿರುವ ಫಾರ್ವರ್ಡ್ ಲೊಕೇಶನ್ ನಲ್ಲಿದ್ದಾರೆ. ಅಲ್ಲಿಗೆ ಮೋದಿ ಮುಂಜಾನೆ ತಲುಪಿದ್ದು, ಅವರು ಸೈನ್ಯ, ವಾಯುಪಡೆ ಮತ್ತು ಐಟಿಬಿಪಿಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಈ ಪ್ರದೇಶದ 11,000 ಅಡಿ ಎತ್ತರದಲ್ಲಿದ್ದು, ನಿಮು ಕಠಿಣ ಭೂಪ್ರದೇಶಗಳಲ್ಲಿ ಒಂದಾಗಿದೆ. ಇದು ಜನ್ಸ್ಕರ್ ಶ್ರೇಣಿಯಿಂದ ಆವೃತವಾಗಿದೆ ಮತ್ತು ಸಿಂಧೂ ತೀರದಲ್ಲಿದೆ. ಮೋದಿ ಜೊತೆ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಇದ್ದಾರೆ.
ಜೂನ್ 15 ದಂದು ಭಾರತದ ಸೇನೆ ಮತ್ತು ಚೀನಾ ನಡುವೆ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ 20 ಮಂದಿ ಭಾರತದ ಸೈನಿಕರು ಹುತಾತ್ಮರಾಗಿದ್ದರು. ಸಂಘರ್ಷದ ಬಳಿಕ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವೆ ಸುಧೀರ್ಘ ಮಾತುಕತೆ ನಡೆಯುತ್ತಲೇ ಇವೆ.








