ಉಡುಪಿ: ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ, ಹೊರಗೆ ಕಾರಿನಲ್ಲಿ ಮಲಗಿದ್ದ ಸಂದರ್ಭದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಣ್ಣನ ಸ್ನೇಹಿತನೊಂದಿಗೆ ತನ್ನ ತಂದೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ರಾತ್ರಿ ಕಾರಿನಲ್ಲಿ ಮಲಗಿ ಬೆಳಗಾಗುವಷ್ಟರಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ನಿವಾಸಿ 32 ವರ್ಷದ ಗುರುರಾಜ್ ಸಾವನ್ನಪ್ಪಿದ ದುರ್ದೈವಿ. ಗುರುರಾಜ್ ತನ್ನ ತಂದೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದ ಹಿನ್ನೆಲೆ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿ, ಗ್ಲಾಸ್ ಮುಚ್ಚಿ ಎಸಿ ಹಾಕಿ ಮಲಗಿದ್ದರು.
ಆದರೆ, ಬೆಳಗಾಗುವಷ್ಟರಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಉಸಿರುಗಟ್ಟಿ ಸಾವನ್ನಪ್ಪಲು ನಿಖರ ಕಾರಣ ಏನು ಎಂಬುವುದು ಮರಣೋತ್ತರ ವರದಿಯಿಂದ ತಿಳಿದು ಬರಲಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








