ರಾಯಚೂರು: ಆಸ್ತಿಗಾಗಿ ತಮ್ಮಿಂದಿರೇ ಸೇರಿಕೊಂಡು ಅಣ್ಣನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮಾನ್ವಿ(Manvi) ತಾಲೂಕಿನ ಕುರಡಿ ಗ್ರಾಮದಲ್ಲಿ ನಡೆದಿದೆ. ಪಿತ್ರಾರ್ಜಿತ ಆಸ್ತಿಯ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸಂಜಯ್ ಕುರ್ಡಿಕರ್ (38) ಕೊಲೆಯಾಗಿರುವ ಅಣ್ಣ.
ಪಿತ್ರಾರ್ಜಿತ ಆಸ್ತಿಯು ಈ ಸಹೋದರರಿಗೆ ಹಂಚಿಕೆಯಾಗಿರಲಿಲ್ಲ. ಆದರೆ, ಕೊಲೆಯಾಗಿರುವ ಸಂಜಯ ಅವರು ನ್ಯಾಯಾಲಯ (Court) ಮೆಟ್ಟಿಲು ಏರಿ ತನ್ನ ಪಾಲಿನ ಆಸ್ತಿ ಪಡೆದಿದ್ದ. ಇದರಿಂದಾಗಿ ಇನ್ನುಳಿದ ಸಹೋದರರು ಕೋಪಗೊಂಡಿದ್ದರು. ಹೀಗಾಗಿ ಆತನೊಂದಿಗೆ ಆಗಾಗ ಜಗಳ ಮಾಡುತ್ತಿದ್ದರು ಎನ್ನಲಾಗಿದೆ.
ಇದೇ ಜಗಳ ವಿಕೋಪಕ್ಕೆ ತೆರಳಿ ಗ್ರಾಮದಲ್ಲಿನ ದೇವಿ ವೃತ್ತದಲ್ಲಿ ಹಾಡುಹಗಲೇ ತಮ್ಮಂದಿರೇ ಸೇರಿಕೊಂಡು ಅಣ್ಣನಿಗೆ ಕಬ್ಬಿಣದ ರಾಡ್, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸಂಜೀವ್, ಸಂಘರ್ಷ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ 6 ಜನ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಡುಹಗಲೇ ನಡೆದ ಕೊಲೆ ಕಂಡು ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.








