ಮುಂಬೈ: ಪಾಠ ಹೇಳಿ, ತಿದ್ದಿ -ತೀಡಿ ಬುದ್ಧಿ ಹೇಳಬೇಕಾಗಿದ್ದ ಶಿಕ್ಷಕನೇ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಅಮಾನವೀಯ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ (Maharashtra) ಪುಣೆಯ (Pune) ಪಿಂಪ್ರಿ ಚಿಂಚ್‍ವಾಡ್ ಎಂಬ ಪಟ್ಟಣದ ಶಾಲೆಯೊಂದರ (School)ರಲ್ಲಿ ಈ ಘಟನೆ ನಡೆದಿರುವ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಿನ್ಸಿಪಾಲ್, ದೈಹಿಕ ಶಿಕ್ಷಕ, ಟ್ರಸ್ಟಿ ಮತ್ತು ಇನ್ನಿತರ ನಾಲ್ವರು ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಿಟಿ ಶಿಕ್ಷಕ, ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈತ ಹಿಂದೆಯೂ ಕಿರುಕುಳ ಮತ್ತು ಪೋಕ್ಸೋ ಕಾಯ್ದೆ (POCSO Act) ಅಡಿ ಪೊಲೀಸರ ಅತಿಥಿಯಾಗಿದ್ದ.
ಆದರೂ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶಿಕ್ಷಕನನ್ನು ಶಾಲಾ ಆಡಳಿತ ಮಂಡಳಿ ಉಳಿಸಿಕೊಂಡಿತ್ತು. ಈ ನಿರ್ಲಕ್ಷ್ಯಕ್ಕಾಗಿ ಪ್ರಾಂಶುಪಾಲರು ಮತ್ತು ಟ್ರಸ್ಟಿ ಸೇರಿದಂತೆ ಇನ್ನಿತರ 6 ಜನ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಾಲಕಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಸದ್ಯ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.








