ಬೆಂಗಳೂರು: ಪಾಪಿ ಪತಿಯೊಬ್ಬ ಚಿತ್ರಹಿಂಸೆ ನೀಡಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು ಪತಿಯೇ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಘಟನೆ ಕೆಂಗೇರಿಯ (Kengeri) ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ.
ನವ್ಯಾ (25) ಕೊಲೆಯಾದ ದುರ್ದೈವ ಪತ್ನಿ. ಕಿರಣ್ ಕೊಲೆ ಮಾಡಿದ ಪಾಪಿ ಪತಿ. ಪತ್ನಿಯ ಶೀಲ ಶಂಕಿಸಿ ಆರೋಪಿಯು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಭದ್ರಾವತಿ ಮೂಲದ ನವ್ಯಾ, ಚಿಕ್ಕಬಳ್ಳಾಪುರ ಮೂಲದ ಕಿರಣ್ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ನವ್ಯಾ ಸಿನಿಮಾ ರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಪತಿ ಕಿರಣ್ ಕ್ಯಾಬ್ ಚಾಲಕನಾಗಿದ್ದ.
ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಹೊಂದಾಣಿಕೆಯ ಕೊರತೆಯಾಗಿ ಜಗಳ ನಡೆಯುತ್ತಿತ್ತು. ಪತಿ ಹೆಚ್ಚಾಗಿ ಪತ್ನಿಯ ಮೇಲೆ ಶಂಕಿಸುತ್ತಿದ್ದ. ಹೀಗಾಗಿ ಗಲಾಟೆ ಜೋರಾಗಿ ನಡೆಯುತ್ತಿತ್ತು ಎನ್ನಲಾಗಿದೆ. ಹೀಗೆ ಬುಧವಾರ ಕೂಡ ಜಗಳ ನಡೆದಿದೆ. ಅದು ವಿಕೋಪಕ್ಕೆ ತೆರಳಿ ನವ್ಯಾಳನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆ ಮರೆಸಿಕೊಂಡಿದ್ದ ಆರೋಪಿ ಕಿರಣ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.








