ಮುಂಬೈ: ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಶಿಕ್ಷಕನಿಗೆ ಬೆತ್ತಲೆ ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ.
ಈ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಟ್ಯೂಷನ್ ಕ್ಲಾಸ್ ಗೆ ಬರುತ್ತಿದ್ದ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ವಿಷಯ ಪಾಲಕರಿಗೆ ಗೊತ್ತಾಗುತ್ತಿದ್ದಂತೆ ಬಾಲಕಿಯರ ಪೋಷಕರು ಮತ್ತು ಸ್ಥಳೀಯರು ಸೇರಿ ಟ್ಯೂಷನ್ ಶಿಕ್ಷಕನನ್ನು ಥಳಿಸಿ, ಆತನ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ಆನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ಕೆಲವರು ಮೆಚ್ಚಿದ್ದಾರೆ. ಇನ್ನೂ ಕೆಲವರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
13 ವರ್ಷದ ಬಾಲಕಿ ಆತನ ಟ್ಯೂಷನ್ ತರಗತಿಗೆ ಹೋಗಲು ನಿರಾಕರಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಆಕೆಯ ಪೋಷಕರು ಕಾರಣವನ್ನು ಕೇಳಿದಾಗ ಆಕೆ ಟ್ಯೂಷನ್ ಶಿಕ್ಷಕ ದಿನವೂ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಹೇಳಿದ್ದಾಳೆ. ಕೂಡಲೇ ಎಚ್ಚೆತ್ತುಕೊಂಡ ಪೋಷಕರು ಆ ಟ್ಯೂಷನ್ ಕ್ಲಾಸ್ನ ಬೇರೆ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಅವರಿಗೂ ಇದೇ ರೀತಿಯ ಅನುಭವವಾಗಿದ್ದು ತಿಳಿದು ಬಂದಿದೆ. ಆನಂತರ ಶಿಕ್ಷಕರನ್ನು ಥಳಿಸಿದ್ದಾರೆ.