ಚಿಕ್ಕೋಡಿ: ಹಲಾಲ್ ಮುಕ್ತ ಗಣೇಶ ಹಬ್ಬ(Ganeshotsava) ಆಚರಿಸುವಂತೆ ಶ್ರೀರಾಮ ಸೇನೆ (Sri Rama Sene) ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Muthalik) ಕರೆ ನೀಡಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬದ ಸಂದರ್ಭದಲ್ಲಿ ಗೋ ಭಕ್ಷಕರು, ಗೋಹಂತಕರಿಂದ ಯಾವುದೇ ವಸ್ತು ಖರೀದಿಸಬೇಡಿ. ಈ ಅಪರಾಧ, ತಪ್ಪನ್ನು ಯಾರೂ ಮಾಡದೆ ಪವಿತ್ರ ಭಾವದಿಂದ ಹಬ್ಬ ಆಚರಿಸಿ. ಶಾಸ್ತ್ರಬದ್ಧವಾಗಿ ಮಣ್ಣಿನ ಗಣಪತಿಯನ್ನೇ ಪೂಜೆ ಮಾಡಬೇಕು. ಪಿಒಪಿ ಗಣಪತಿ ಉಪಯೋಗ ಬೇಡ. ಇದು ಅಪವಿತ್ರವಾದದ್ದು. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಸಿನಿಮಾ, ಅಶ್ಲೀಲ ಗೀತೆ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಪಟಾಕಿ, ಹೂವು ಹಣ್ಣು, ತರಕಾರಿ, ಎಲೆಕ್ಟ್ರಾನಿಕ, ಎಲೆಕ್ಟ್ರಿಕ್ ಸಾಮಗ್ರಿ ಪವಿತ್ರವಾದದ್ದನ್ನು ಪಡೆಯಬೇಕು. ಅಪವಿತ್ರವಾದ ವಸ್ತು ಖರೀದಿ ಮಾಡಿದರೆ ಶಾಸ್ತ್ರಕ್ಕೆ ವಿರೋಧ ಆಗುತ್ತದೆ. ಗಣೇಶೋತ್ಸವ ಮೆರವಣಿಗೆಯಲ್ಲಿ ಮದ್ಯಪಾನ, ಗುಟ್ಕಾ ಬೇಡ ಎಂದು ಹೇಳಿದ್ದಾರೆ.








