ರಾಯಚೂರು: ಶಾಲಾ ಬಸ್ (School Bus)ಹಾಗೂ ಸರ್ಕಾರಿ ಬಸ್ (Government Bus) ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮಾನ್ವಿ (Manavi) ತಾಲೂಕಿನ ಕಪಗಲ್ ಹತ್ತಿರ ನಡೆದಿದೆ. ಸಮರ್ಥ (7) ಹಾಗೂ ಶ್ರೀಕಾಂತ (12) ಸಾವನ್ನಪ್ಪಿರುವ ವಿದ್ಯಾರ್ಥಿಗಳು. ಕೂಡಲೇ ರಿಮ್ಸ್ (RIMS) ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಾಯಗೊಂಡ 40ಕ್ಕೂ ಅಧಿಕ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
40 ಜನ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಪೈಕಿ ಶಾಲಾ ಬಸ್ಸಿನಲ್ಲಿದ್ದ 17 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಲ್ಕು ವಿದ್ಯಾರ್ಥಿಗಳ ಕಾಲುಗಳು ತುಂಡಾಗಿವೆ. 23 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂವರ ಸ್ಥಿತಿ ಗಂಭೀರವಾಗಿದೆ. ಸರ್ಕಾರಿ ಬಸ್ಸಿನಲ್ಲಿದ್ದ 17 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಯಚೂರು ಜಿಲ್ಲಾಧಿಕಾರಿ ನಿತೀಶ್.ಕೆ (Nitish K) ಈ ಘಟನೆ ಕುರಿತು ಮಾತನಾಡಿ, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆಗೆ ಪರಿಹಾರ ನೀಡಲು ಸೂಚಿಸಿದ್ದಾರೆ. ಕೂಡಲೇ ಪರಿಹಾರ ಒದಗಿಸಲು ಆದೇಶ ನೀಡಿದ್ದಾರೆ. ಈ ಕುರಿತು ಪೊಲೀಸ್ ತನಿಖೆಯಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಶಾಲೆಯ ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯ ಕಂಡು ಬಂದರೆ ಕೂಡಲೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.








