ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸ್ಫೋಟ ಮುಂದುವರಿದಿದೆ. ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಏತನ್ಮಧ್ಯೆ ಮಾಜಿ ಸಚಿವ ಸಾ.ರಾ ಮಹೇಶ್ ಅವರಿಗೂ ಈಗ ಕೊರೊನಾ ಆತಂಕ ಎದುರಾಗಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ಹೌದು..! ಕೆ.ಆರ್ ನಗರ ತಾಲೂಕಿನ ಮಹಿಳಾ ತಹಶೀಲ್ದಾರ್ ಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಈ ಹಿನ್ನೆಲೆ ಸಾ.ರಾ ಮಹೇಶ್ ಗೂ ಕೊರೊನಾ ಆತಂಕ ಹೆಚ್ಚಾಗಿದೆ.
ಸಾ.ರಾ ಮಹೇಶ್ ಎರಡು ದಿನಗಳ ಹಿಂದೆ ತಹಶೀಲ್ದಾರ್ ಜೊತೆ ಕೆ.ಆರ್ ನಗರ ತಾಲೂಕಿನ ಸಾಲಿಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸೀಲ್ ಡೌನ್ ಆಗಿದ್ದ ಬ್ರಾಹ್ಮಣರ ಬೀದಿ ಮತ್ತು ಕೋಟೆ ಬೀದಿಗಳಲ್ಲಿನ 150ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ದಿನಸಿ ಕಿಟ್, ಔಷಧಿಗಳನ್ನು ವಿತರಿಸಿದ್ದರು. ಇದೀಗ ಮಹಿಳಾ ತಹಶೀಲ್ದಾರ್ ಗೆ ಕೊರೊನಾ ಇರೋದು ದೃಢವಾದ ಹಿನ್ನೆಲೆ ಸಾ.ರಾ ಮಹೇಶ್ ಅವರನ್ನೂ ಕ್ವಾರಂಟೈನ್ ಮಾಡಲಾಗಿದೆ.








