ಬೆಂಗಳೂರು: ವೈಯಾಲಿಕಾವಲ್ ನಲ್ಲಿ ನಡೆದ ಮಹಾಲಕ್ಷ್ಮೀ ಕೊಲೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ. ಆದರೆ, ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿಯ ಚಲನವನವನ್ನು ಪೊಲೀಸರು ಗಮನಿಸಿದ್ದರು. ಇನ್ನೇನು ಆರೋಪಿಯನ್ನು ಬಂಧಿಸಬೇಕು ಎನ್ನುವಷ್ಟರಲ್ಲೇ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಂಡ ಆರೋಪಿ ಎನ್ನಲಾಗಿದೆ.
ಮಹಾಲಕ್ಷ್ಮೀ ಕೊಲೆ ನಂತರ ಮೃತ ಮುಕ್ತಿ ರಂಜನ್ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈಗಾಗಲೇ ಬೆಂಗಳೂರು ಪೊಲೀಸರು ವಿಚಾರಣೆಗೆ ಒಡಿಶಾಗೆ ತೆರಳಿದ್ದಾರೆ. ಮಹಾಲಕ್ಷ್ಮೀ ಕೊಲೆ ಕೇಸ್ನಲ್ಲಿ ಸಾಕಷ್ಟು ಜನರ ಹೆಸರು ತಳುಕು ಹಾಕಿಕೊಂಡಿತ್ತು. ಸುಂದರಿ ಸಂಪರ್ಕದಲ್ಲಿದ್ದವರಿಗೆ ಸಂಕಷ್ಟ ಎದುರಾಗಿತ್ತು. ಹಂತಕನ ಬಗ್ಗೆ ಪತ್ತೆ ಹಚ್ಚುವುದೇ ಸವಾಲಾಗಿತ್ತು. ಸದ್ಯ ಹಂತಕನ ಸುಳಿವು ಸಿಕ್ಕಿತ್ತು. ಅಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮಹಾಲಕ್ಷ್ಮೀ ಮಲ್ಲೇಶ್ವರಂನಲ್ಲಿನ ಫ್ಯಾಷನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಅಲ್ಲಿ ಟೀಮ್ ಹೆಡ್ ಆಗಿದ್ದ. ಇಬ್ಬರ ಮಧ್ಯೆ ಸಲುಗೆ ಇತ್ತು. ಸೆಪ್ಟೆಂಬರ್ 1ರಂದು ಇಬ್ಬರೂ ರಜೆ ಹಾಕಿದ್ದರು. ತಾಯಿಗೆ ಫೋನ್ ಮಾಡಿದ್ದ ಮಹಾಲಕ್ಷ್ಮೀ, ಅಮ್ಮ ಮನೆಗೆ ಬರ್ತೀನಿ ಅಂತ ಹೇಳಿದ್ದಳು.
ಆದರೆ, ಇಬ್ಬರ ಮಧ್ಯೆ ಏನು ಬಂತೋ ಕೊಲೆಯಾಗಿದ್ದಾಳೆ. ಮೃತದೇಹವನ್ನು 50 ಪೀಸ್ ಮಾಡಿ, ಫ್ರೀಡ್ಜ್ಗೆ ತುಂಬಿಸಿ ತನ್ನೂರಿಗೆ ಎಸ್ಕೇಪ್ ಆಗಿದ್ದ. ಈಗ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.








