ಬಾಗಲಕೋಟೆ: ಕ್ಯಾಂಟರ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರು ಗ್ರಾಮದ ಹತ್ತಿರ ಈ ಘಟನೆ ನಡೆದಿದೆ. ಘಟನೆಯಲ್ಲಿ ಲಕ್ಷ್ಮಣ ವಡ್ಡರ್ (55),ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕಮಕ್ಕಳು (50) ಹಾಗೂ ಕಾರು ಚಾಲಕ ರಫಿಕ್ ಮುಲ್ಲಾ(25) ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರನ್ನು ವಿಜಯಪುರ (Vijayapura) ಜಿಲ್ಲೆ ಬಿದರಕುಂದಿ ಗ್ರಾಮದವರು ಎನ್ನಲಾಗಿದೆ.
ಕಾರು ಮುದ್ದೇಬಿಹಾಳ (Muddebihal) ಕಡೆಗೆ ಹೊರಟಿದ್ದರೆ, ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಮಾರ್ಗವಾಗಿ ಬರುತ್ತಿತ್ತು. ಈ ಸಂದರ್ಭದಲ್ಲಿ ಕಾರು ಚಾಲಕ ನಿದ್ರೆಗೆ ಜಾರಿದ್ದು, ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








