ಐಸಿಸಿ ನಿರ್ಧಾರವನ್ನು ಕಾಯುವುದರಲ್ಲಿ ಅರ್ಥವಿಲ್ಲ – ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಬಿಸಿಸಿಐ ಪ್ಲಾನ್ ?
ಬಿಸಿಸಿಐಗೆ ಏನು ಆಗಿದೆಯೋ ಗೊತ್ತಿಲ್ಲ. ಒಂದು ಕಡೆ ದೇಶದಲ್ಲಿ ಕೊರೋನಾ ವೈರಸ್ ಹಾವಳಿ ಮಿತಿ ಮೀರುತ್ತಿದೆ. ಆದ್ರೂ ಹೇಗಾದ್ರೂ ಮಾಡಿ 2020ರ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಬಿಸಿಸಿಐ ಪ್ಲಾನ್ ಮಾಡಿಕೊಳ್ಳುತ್ತಿದೆ. ಈ ಹಿಂದೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಭವಿಷ್ಯವನ್ನು ಅರಿತುಕೊಂಡು ಐಪಿಎಲ್ ಟೂರ್ನಿಯನ್ನು ಸಂಘಟಿಸುವ ಬಗ್ಗೆ ಬಿಸಿಸಿಐ ಚಿಂತನೆ ಮಾಡುತ್ತಿತ್ತು.
ಆದ್ರೆ ಇದೀಗ ಬಿಸಿಸಿಐ ಐಸಿಸಿಯ ಅಂತಿಮ ನಿರ್ಧಾರವನ್ನು ಕಾಯುವ ಸ್ಥಿತಿಯಲ್ಲಿಲ್ಲ. ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಐಸಿಸಿ ಮೀನಾ ಮೇಷ ಎನಿಸುತ್ತಿದೆ. ಹೀಗಾಗಿ ಐಸಿಸಿ ಧೋರಣೆಯಿಂದ ಬೇಸೆತ್ತಿರುವ ಬಿಸಿಸಿಐ ಇದೀಗ 2020ರ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಯೋಜನೆ ರೂಪಿಸುತ್ತಿದೆ.
ಈಗಾಗಲೇ ಬಿಸಿಸಿಐ ಮುಂದೆ ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಎರಡು ಮೂರು ಯೋಜನೆಗಳಿವೆ. ಪ್ರೇಕ್ಷಕರಿಲ್ಲದೆ ಟೂರ್ನಿಯನ್ನು ಸಂಘಟಿಸುವುದು ಒಂದು ಯೋಜನೆಯಾಗಿದೆ. ಆದ್ರೆ ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ಪ್ರೇಕ್ಷಕರಿಲ್ಲದೇ ಸಂಘಟಿಸುವುದು ಕೂಡ ದೂರದ ಮಾತಾಗಿದೆ. ಈ ನಡುವೆ, ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆಗಳು ಆಸಕ್ತಿ ಹೊಂದಿವೆ.
ಏತನ್ಮಧ್ಯೆ, ಭಾರತೀಯ ಕ್ರಿಕೆಟಿಗರು ಇನ್ನೂ ಅಭ್ಯಾಸದಲ್ಲಿ ಕೂಡ ನಿರತರಾಗಿಲ್ಲ. ಈಗಾಗಲೇ ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗಳು ರದ್ದುಗೊಂಡಿವೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಕೂಡ ರದ್ದುಗೊಳ್ಳುವ ಸಾಧ್ಯತೆಗಳಿವೆ. ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುವುದರ ಬಗ್ಗೆಯೂ ಅನುಮಾನವಿದೆ. ಆದ್ರೆ ಬಿಸಿಸಿಐ ಪ್ಲಾನ್ ಬೇರೇನೇ ಇದೆ. ಅಕ್ಟೋಬರ್ -ನವೆಂಬರ್ ನಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಪ್ಲಾನ್ ರೆಡಿ ಮಾಡಿಕೊಳ್ಳುತ್ತಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕೋಶಾಧಿಕಾರಿ ಅರುಣ್ ಧುಮಾಲ್, ಟಿ-ಟ್ವೆಂಟಿ ವಿಶ್ವಕಪ್ ಭವಿಷ್ಯ ನಿರ್ಧರಿಸುವುದು ಬಿಸಿಸಿಐ ಅಲ್ಲ. ಐಸಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಐಸಿಸಿ ತೀರ್ಮಾನ ತೆಗೆದುಕೊಳ್ಳದಿರುವುದರಿಂದ ಈಗಾಗಲೇ ಸಾಕಷ್ಟು ಸಮಯ ಕೂಡ ವ್ಯರ್ಥವಾಗಿದೆ. ಇನ್ನೂ ಕಾಯುವುದರಲ್ಲಿ ಅರ್ಥವಿಲ್ಲ. ಹಾಗಾಗಿ ಬಿಸಿಸಿಐ ಐಪಿಎಲ್ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಯೋಜನೆ ರೂಪಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.








