ಬೆಂಗಳೂರು: ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರದಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿದ್ದಾರೆ.
ಬುಧವಾರವಷ್ಟೇ ಹರಿಯಾಣ ಚುನಾವಣಾ (Haryana Poll) ಪ್ರಚಾರದ ವೇಳೆ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಮುಡಾ ಪ್ರಕರಣವನ್ನ ಪ್ರಸ್ತಾಪಿಸಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕರ್ನಾಟಕದ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ನಡೆಯುತ್ತಿದೆ ಎಂದು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಬಹುಶಃ ಪ್ರಧಾನಿಯವರು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಉಲ್ಲೇಖವಾಗುತ್ತಿರುವ ಪಕ್ಷಗಳ ಹೆಸರಲ್ಲಿ ಗೊಂದಲ ಮಾಡಿಕೊಂಡು, ಬಿಜೆಪಿ ಬದಲಿಗೆ ಕಾಂಗ್ರೆಸ್ ಎಂದು ತಿಳಿದುಕೊಂಡು ಈ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಕೂಡಲೇ ಗೊಂದಲ ನಿವಾರಿಸಿಕೊಳ್ಳಿ ಎಂದು ವಂಗ್ಯವಾಡಿದ್ದಾರೆ.
ಬಿಜೆಪಿಯ ರಕ್ತದಲ್ಲಿ ಹೇಗೆ ಕೋಮುವಾದ ಸೇರಿಕೊಂಡಿದೆಯೋ, ಅದೇ ರೀತಿ ಆಂತರಿಕ ಕಲಹವೂ ಸೇರಿಕೊಂಡಿದೆ. ಪ್ರತಿನಿತ್ಯ ಬಿಜೆಪಿ ನಾಯಕರು ಆರೋಪ – ಪ್ರತ್ಯಾರೋಪ, ಪರಸ್ಪರ ದೂಷಣೆ – ನಿಂದನೆಯ ಧಾರವಾಹಿ ಮೂಲಕ ಜನರನ್ನು ರಂಜಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸದ್ದಾರೆ.
ದಯವಿಟ್ಟು ತಾವು ಬೆಳಿಗ್ಗೆ ಎದ್ದು ಕರ್ನಾಟಕದಿಂದ ಪ್ರಕಟವಾಗುವ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ನಿಮ್ಮ ಪಕ್ಷದಲ್ಲಿ ನಡೆಯುವ ಆಂತರಿಕ ಕಲಹದ ಒಂದು ಅಂದಾಜು ಸಿಗಬಹುದು. ಆ ನಂತರವಾದರೂ ನೀವು ನಮ್ಮ ಪಕ್ಷದ ಕಡೆ ಬೊಟ್ಟು ಮಾಡುವುದನ್ನು ನಿಲ್ಲಿಸಿದರೆ ನಿಮ್ಮ ಪಕ್ಷದ ಅಂತರ್ ಕಲಹ ಗೊತ್ತಾಗಲಿದೆ ಎಂದಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಳಿಗ್ಗೆ ಎದ್ದ ಕೂಡಲೇ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಇವರ ಆರೋಪಗಳಿಗೆ ಶಾಸಕರಾದ ರಮೇಶ್ ಜಾರಕಿಹೊಳಿ, ಸಿ.ಟಿ ರವಿ ಮೊದಲಾದವರು ದನಿಗೂಡಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.








