ಬಾಗಲಕೋಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂದರೆ ಪಕ್ಷದಿಂದ ದೂರವಾಗಿರುವ ಬಂಡಾಯ ನಾಯಕರನ್ನು ಮತ್ತೆ ಮನೆಗೆ ಕರೆತರುವುದು ಅನಿವಾರ್ಯ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಪಕ್ಷದ ವರಿಷ್ಠರಿಗೆ ಮತ್ತು ರಾಜ್ಯ ನಾಯಕತ್ವಕ್ಕೆ ಕಿವಿಮಾತು ಹೇಳಿದ್ದಾರೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಎಂಬ ಸತ್ಯವನ್ನು ನೆನಪಿಸಿರುವ ಅವರು, ಬಸನಗೌಡ ಪಾಟೀಲ ಯತ್ನಾಳ ಮತ್ತು ಕೆ.ಎಸ್. ಈಶ್ವರಪ್ಪ ಅವರಂತಹ ಹಿರಿಯ ನಾಯಕರ ಅಗತ್ಯ ಪಕ್ಷಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ.
ರಾಜಕೀಯ ಎಂಬುದು ನಂಬರ್ ಗೇಮ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರಾಣಿ, ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು. ಇಲ್ಲಿ ಯಾರೂ ಶಾಶ್ವತ ಮಿತ್ರರಲ್ಲ ಮತ್ತು ಯಾರೂ ಶಾಶ್ವತ ಶತ್ರುಗಳಲ್ಲ. ಅಂತಿಮವಾಗಿ ರಾಜಕೀಯ ಎಂಬುದು ನಂಬರ್ ಗೇಮ್ ಆಗಿದ್ದು, ಅಧಿಕಾರ ಹಿಡಿಯಲು ಸಂಖ್ಯಾಬಲ ಮುಖ್ಯ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಅಸಮಾಧಾನಗೊಂಡು ಹೊರಗಿರುವವರನ್ನು ಮತ್ತು ಕಾಂಗ್ರೆಸ್‌ನಲ್ಲಿ ಅತೃಪ್ತರಾಗಿರುವವರನ್ನು ಬಿಜೆಪಿಗೆ ಸೆಳೆಯುವ ಕೆಲಸವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಿಜಯೇಂದ್ರ ತಪ್ಪು ತಿದ್ದಿಕೊಳ್ಳಲಿ ಹಿರಿಯರನ್ನು ಗೌರವಿಸಲಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಾರ್ಯವೈಖರಿ ಕುರಿತು ಮಾತನಾಡಿದ ನಿರಾಣಿ, ವಿಜಯೇಂದ್ರ ಅವರು ಮುಂದಿನ ನವೆಂಬರ್‌ಗೆ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಲಿದ್ದಾರೆ. ಅವರು ಬಳ್ಳಾರಿ ಪಾದಯಾತ್ರೆಯನ್ನು ಯಶಸ್ವಿಯಾಗಿ ಸಂಘಟಿಸಿ ಪಕ್ಷದಲ್ಲಿ ಹೊಸ ಚೇತರಿಕೆ ತಂದಿದ್ದಾರೆ ನಿಜ. ಆದರೆ ಸಂಘಟನೆಯಲ್ಲಿ ಅವರು ಮಾಡುತ್ತಿರುವ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಹಿರಿಯ ನಾಯಕರನ್ನು ಕಡೆಗಣಿಸದೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಒಟ್ಟಾಗಿ ಸಾಗಬೇಕು ಎಂದು ಸಲಹೆ ನೀಡಿದರು. ಗೆಳೆಯ ಯತ್ನಾಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನನ್ನ ಆತ್ಮೀಯ ಸ್ನೇಹಿತರು ಎಂದು ಸಂಕ್ಷಿಪ್ತವಾಗಿ ಉತ್ತರಿಸಿದರು.
ಅಹಿಂದ ಒಡೆದ ಮನೆ ಕಾಂಗ್ರೆಸ್ ಶಾಸಕರಲ್ಲಿ ಭ್ರಮನಿರಸನ
ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಲೇವಡಿ ಮಾಡಿದ ನಿರಾಣಿ, ಸಿದ್ದರಾಮಯ್ಯ ಮತ್ತು ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಅಹಿಂದ ಈಗ ಇಬ್ಬಾಗವಾಗಿದೆ. ಪ್ರಮುಖ ನಾಯಕರನ್ನೇ ಕಡೆಗಣಿಸಿ ಅಹಿಂದ ಸಭೆ ನಡೆಸಲಾಗುತ್ತಿದೆ. ಇನ್ನು ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಇದರಿಂದ ಅವರದೇ ಪಕ್ಷದ ಶಾಸಕರು ಭ್ರಮನಿರಸನಗೊಂಡಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಚಿವರು ಕಾಲಹರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಯೋ ಪ್ಲಾಸ್ಟಿಕ್ ಘಟಕಕ್ಕೆ ಡಿಕೆಶಿ ಗ್ರೀನ್ ಸಿಗ್ನಲ್
ತಮ್ಮ ಉದ್ಯಮದ ಕುರಿತು ಮಾಹಿತಿ ನೀಡಿದ ನಿರಾಣಿ, ನಿರಾಣಿ ಗ್ರೂಪ್ ಆಫ್ ಕಂಪನಿಯಿಂದ ರಾಜ್ಯದಲ್ಲಿ ಹೊಸದಾಗಿ ಬಯೋ ಪ್ಲಾಸ್ಟಿಕ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಕರೆದು ಅನುಮತಿ ನೀಡಿದ್ದಾರೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಕೆಲಸ ಮಾಡುತ್ತಿದ್ದಾರೆಯಾದರೂ, ಇಲಾಖೆಯಲ್ಲಿ ವೇಗ ನಿರೀಕ್ಷಿತ ಮಟ್ಟದಲ್ಲಿಲ್ಲ. ವಿಜಯಪುರಕ್ಕೆ ಮೈಸೂರು ಸೋಪ್ ಫ್ಯಾಕ್ಟರಿ ತರುವ ಅವರ ಭರವಸೆ ಏನಾಗಲಿದೆ ಎಂದು ಕಾದು ನೋಡಬೇಕು ಎಂದರು.








