ಮೈಸೂರು: ಟಿ ನರಸೀಪುರದ ಇನ್‌ಸ್ಪೆಕ್ಟರ್ ಧನಂಜಯ ಅವರ ವಿವಾದಾತ್ಮಕ ನಡೆ ಈಗ ಇಡೀ ಪೊಲೀಸ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದೆ. ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಯು ರಾಜ್ಯಾದ್ಯಂತ ಕಿಚ್ಚು ಹಚ್ಚುತ್ತಿದ್ದಂತೆಯೇ, ಇನ್‌ಸ್ಪೆಕ್ಟರ್ ಈಗ ತನ್ನ ತಪ್ಪು ಮುಚ್ಚಿಕೊಳ್ಳಲು ಮಾಧ್ಯಮದವರನ್ನೇ ಬಲಿಪಶು ಮಾಡಲು ಹೊರಟಿದ್ದಾರೆ. ಸತ್ಯವನ್ನು ಜಗತ್ತಿಗೆ ತಿಳಿಸಿದ ಖಾಸಗಿ ವಾಹಿನಿ ಮಾಲೀಕ ಮಂಜುನಾಥ್ ಅವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಚಾರದ ಹುಚ್ಚಿನಿಂದ ತಾನೇ ತೋಡಿದ ಹಳ್ಳಕ್ಕೆ ಬಿದ್ದ ಇನ್‌ಸ್ಪೆಕ್ಟರ್
ಸೆಪ್ಟೆಂಬರ್ 7ರಂದು ಠಾಣೆಯಲ್ಲಿ ಶಾಂತಿ ಸಭೆ ನಡೆಸುವಾಗ ಇನ್‌ಸ್ಪೆಕ್ಟರ್ ಧನಂಜಯ ಅವರೇ ಖುದ್ದಾಗಿ ಮಾಧ್ಯಮದವರನ್ನು ಮತ್ತು ಯೂಟ್ಯೂಬರ್‌ಗಳನ್ನು ಪ್ರಚಾರಕ್ಕಾಗಿ ಕರೆಸಿದ್ದರು. ಆ ಸಭೆಯಲ್ಲಿ ಮಸೀದಿ ಮುಂದೆ ಗಣಪತಿ ಮೆರವಣಿಗೆ ಮಾಡಿದರೆ ಗ್ರಹಚಾರ ಬಿಡಿಸುತ್ತೇನೆ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗಿ ದೊಡ್ಡ ಮಟ್ಟದ ವಿವಾದ ಸೃಷ್ಟಿಸುತ್ತಿದ್ದಂತೆಯೇ, ಇನ್‌ಸ್ಪೆಕ್ಟರ್ ಈಗ ವರಸೆ ಬದಲಿಸಿದ್ದಾರೆ. ತನ್ನದೇ ಠಾಣೆಯ ಪಿಸಿಯಿಂದ ವರದಿಗಾರ ಮಂಜುನಾಥ್ ವಿರುದ್ಧ ದೂರು ಕೊಡಿಸಿ, ವಿಡಿಯೋವನ್ನು ತಿರುಚಲಾಗಿದೆ ಎಂದು ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ನಡೆ ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತಾಗಿದೆ ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ.
ನನಗೆ ನ್ಯಾಯ ಕೊಡಿಸಿ: ಪ್ರತಾಪ್ ಸಿಂಹ ಮತ್ತು ಆರ್ ಅಶೋಕ್ ಮೊರೆ ಹೋದ ವರದಿಗಾರ
ತಮ್ಮ ಮೇಲೆ ಎಫ್‌ಐಆರ್ ಆಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವರದಿಗಾರ ಮಂಜುನಾಥ್, ಇನ್‌ಸ್ಪೆಕ್ಟರ್ ಅವರ ದ್ವಂದ್ವ ನೀತಿಯನ್ನು ಬಯಲು ಮಾಡಿದ್ದಾರೆ. ಪ್ರತಿಯೊಂದು ಸಣ್ಣ ವಿಚಾರಕ್ಕೂ ಠಾಣೆಗೆ ಕರೆಸಿ ಸುದ್ದಿ ಮಾಡಿಸಿ ಪ್ರಚಾರ ಪಡೆಯುತ್ತಿದ್ದ ಇನ್‌ಸ್ಪೆಕ್ಟರ್, ಈಗ ತಮಗೆ ಸಂಕಷ್ಟ ಎದುರಾಗುತ್ತಿದ್ದಂತೆಯೇ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಒಂದು ಕಡೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಚಿವರು ಇನ್‌ಸ್ಪೆಕ್ಟರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಗಿದ್ದಲ್ಲಿ, ಸತ್ಯ ಹೇಳಿದ ನನ್ನ ಮೇಲೆ ಎಫ್‌ಐಆರ್ ಯಾಕೆ ಮಾಡಬೇಕು? ಸತ್ಯ ಪ್ರಸಾರ ಮಾಡಿದ್ದೇ ತಪ್ಪಾ ಎಂದು ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ತಮಗೆ ನ್ಯಾಯ ಕೊಡಿಸುವಂತೆ ಬಹಿರಂಗ ಮನವಿ ಮಾಡಿದ್ದಾರೆ.
ಸರ್ಕಾರದ ಸಮರ್ಥನೆ
ಇನ್‌ಸ್ಪೆಕ್ಟರ್ ಧನಂಜಯ ಅವರು ಕಾನೂನು ಸುವ್ಯವಸ್ಥೆ ಕಾಪಾಡಲು ಎಚ್ಚರಿಕೆ ನೀಡಿದ್ದಾರೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ ವಾಸ್ತವದಲ್ಲಿ ಇನ್‌ಸ್ಪೆಕ್ಟರ್ ಅವರು ವಿವಾದದಿಂದ ತಪ್ಪಿಸಿಕೊಳ್ಳಲು ಸುಳ್ಳು ಕೇಸ್ ದಾಖಲಿಸಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ವಿಶ್ಲೇಷಿಸಲಾಗುತ್ತಿದೆ. ಶಾಂತಿ ಕಾಪಾಡುವ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ವರದಿಗಾರನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಇನ್‌ಸ್ಪೆಕ್ಟರ್ ವಿರುದ್ಧ ತನಿಖೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.








