ಮುಂಬಯಿ: ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತೊಂದು ದಾಖಲೆ ಬರೆಯುವ ಸಮೀಪಕ್ಕೆ ಬಂದು ನಿಂತಿದ್ದಾರೆ.
ಮಿಸ್ಟರ್ 360ʼ ಖ್ಯಾತಿಯ ಸೂರ್ಯಕುಮಾರ್ ಯಾದವ್ ಇಲ್ಲಿಯವರೆಗೆ ಆಡಿರುವ 72 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 2,461 ರನ್ ಸಿಡಿಸಿದ್ದಾರೆ. ಅ. 9ರಂದು ಬಾಂಗ್ಲಾದೇಶ ಕ್ರಿಕೆಟ್ ತಂಡದ (Bangladesh Cricket) ವಿರುದ್ಧ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ 39 ರನ್ ಗಳಿಸಿದರೆ, 2,500 ಪೂರೈಸಲಿದ್ದಾರೆ.
ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2,500 ರನ್ ಪೂರೈಸಿದ ವಿಶ್ವದ 2ನೇ ಆಟಗಾರ (Fastest Batter) ಎಂಬ ದಾಖಲೆಯನ್ನು ಬರೆಯಲಿದ್ದಾರೆ. 67 ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಪಾಕ್ ತಂಡದ ನಾಯಕ ಬಾಬರ್ ಆಜಂ (Babar Azam) ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ (Virat Kohli), ಮೊಹಮ್ಮದ್ ರಿಜ್ವಾನ್, ಆರನ್ ಫಿಂಚ್, ಮಾರ್ಟಿನ್ ಗಪ್ಟಿಲ್ ಈ ಸಾಧಕರ ಪಟ್ಟಿಯಲ್ಲಿದ್ದಾರೆ.
ಈ ದಾಖಲೆಯ ಪಟ್ಟಿ ನೋಡುವುದಾದರೆ, ಬಾಬರ್ ಆಜಂ (ಪಾಕಿಸ್ತಾನ) – 67 ಪಂದ್ಯ, ವಿರಾಟ್ ಕೊಹ್ಲಿ (ಭಾರತ) – 73 ಪಂದ್ಯ, ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) – 76 ಪಂದ್ಯ, ಆರನ್ ಫಿಂಚ್ (ಆಸ್ಟ್ರೇಲಿಯಾ) – 78 ಪಂದ್ಯ, ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) – 86 ಪಂದ್ಯ, ಸ್ಥಾನ ಪಡೆದಿದ್ದಾರೆ.
ಅಕ್ಟೋಬರ್ 6ರಂದು ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಗಳಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.








