ಚಿಕ್ಕಬಳ್ಳಾಪುರ: ಬೊಲೆರೋ (Bolero) ವಾಹನ ಹಾಗೂ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಲ್ಲದೇ, ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಂಡುಪಾಳ್ಯ ಗೇಟ್ ಹತ್ತಿರ ಸಂಭವಿಸಿದೆ.
ಬೊಲೆರೋ ವಾಹನದಲ್ಲಿ ಮದನಪಲ್ಲಿ ಕಡೆಯಿಂದ ಆಂಧ್ರ ಪ್ರದೇಶದ ಕದರಿ ಮೂಲದವರು ವಿಜಯಪುರ (Vijayapura) ಕಡೆಗೆ ಹೋಗುತ್ತಿದ್ದು, ದ್ವಿಚಕ್ರ ವಾಹನದಲ್ಲಿ ಆಯಾಜ್(33ವರ್ಷ) ಹಾಗೂ ತನ್ನ ಹೆಂಡತಿ ತರನ್ನುಂ (22ವರ್ಷ) ತೆರಳುತ್ತಿದ್ದರು. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.
ಘಟನೆಯಲ್ಲಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಡ ಆಯಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕದರಿ ಮೂಲದ ಅದಲ್ಲಪ್ಪ ಬೀದಿಯ ಫಕ್ರುದ್ದೀನ್, ಆಜದ್, ಜಬೀನ, ಹಮೀದ್, ಶೋಯಿಬ್, ಸಲೀಮಾ, ಶಕೀರಾ, ಶಬ್ನಂಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.