ಯಾದಗಿರಿ: ರಾಜ್ಯದ ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಟಿನ್ ಶೆಡ್ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಗುರುಮಠಕಲ್ (Gurumatkal) ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಂತನಹಳ್ಳಿ ಗ್ರಾಮದ ನಿವಾಸಿ ಗುಂಜಲಮ್ಮ (68) ಸಾವನ್ನಪ್ಪಿರುವ ದುರ್ದೈವಿ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ರಾತ್ರಿ ಮಲಗಿರುವಾಗ ಸುರಿದ ಮಳೆಯ ರಭಸಕ್ಕೆ ಟಿನ್ ಶೆಡ್ ಗೋಡೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ.
ಅಲ್ಲದೇ, ವೃದ್ಧೆಯ ಸಹೋದರ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗುರುಮಠಕಲ್ ಪೊಲೀಸ್ ಠಾಣಾ (Gurumatkal Police Station) ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.